ಸಚಿವ ಚಲುವರಾಯಸ್ವಾಮಿ (ETV Bharat) ಮಂಡ್ಯ: ಮುಂಗಾರಿನ ಒಂದು ಬೆಳೆಗೆ ಕಟ್ಟು ಪದ್ಧತಿಯಲ್ಲಿ ನೀರನ್ನು ಕೊಡುತ್ತೇವೆ. ಕೆಆರ್ಎಸ್ ಡ್ಯಾಂ ತುಂಬಿದರೆ ಕೃಷಿಗೆ ಸಂಪೂರ್ಣವಾಗಿ ನೀರು ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಮೊದಲ ಬೆಳೆ ಬೆಳೆಯುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ನಾಳೆಯಿಂದಲೇ ಬಿತ್ತನೆ ಬೀಜ ವಿತರಣೆಗೆ ಸೂಚನೆ ನೀಡುತ್ತೇನೆ. ಭತ್ತ, ರಾಗಿ, ಮುಸುಕಿನ ಜೋಳದ ದಾಸ್ತಾನು ನಮ್ಮಲ್ಲಿ ಸಾಕಷ್ಟಿದೆ. ರಾಜ್ಯದಲ್ಲಿ ಬಿತ್ತನೆ ಬೀಜದ ಅಭಾವ ಇಲ್ಲ. ಸದ್ಯ ಕೆರೆ - ಕಟ್ಟೆಗಳ ಭರ್ತಿಗೆ ಅಂತ ನೀರು ಬಿಡಲಾಗಿತ್ತು. ರೈತರ ಬೆಳೆಗೂ ನೀರು ಬಿಡಲು ತೀರ್ಮಾನ ಆಗಿದೆ. ಕಟ್ಟು ಪದ್ಧತಿಯಂತೆ ಮೊದಲ ಬೆಳೆಗೆ ನೀರು ಬಿಡುಗಡೆಗೆ ಮಾಡಲು ತೀರ್ಮಾನ ಮಾಡಲಾಗಿದ್ದು, ರೈತರು ಆತಂಕವಿಲ್ಲದೇ ಬೆಳೆ ಬೆಳೆಯಬಹುದು ಎಂದು ಸಲಹೆ ನೀಡಿದರು.
ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರಾ?:ತಮಿಳುನಾಡಿಗೆ ನೀರು ಬಿಟ್ಟು ಸರ್ವಪಕ್ಷ ಸಭೆ ಕರೆದರು ಎಂಬ ಕೇಂದ್ರ ಸಚಿವ ಹೆಚ್‌ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕಬಿನಿ ಭರ್ತಿಯಾಗಿ ಹೆಚ್ಚುವರಿ ನೀರು ಬಂದಾಗ ಬಿಡಲೇ ಬೇಕು. ನೆಲ, ಜಲ, ಭಾಷೆ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯುವುದು ಸಂಪ್ರದಾಯ. ಇವರು ಸಭೆ ಕರೆದಾಗಲೆಲ್ಲಾ ಏನು ಕ್ರಮ ತೆಗೆದುಕೊಂಡಿದ್ದರು. ಬಾಡೂಟಕ್ಕೆ ಬರ್ತಾರೆ, ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ. ಸರ್ವಪಕ್ಷ ಸಭೆಗೆ ಬರಲ್ಲ ಅಂದರೆ ಇವರು ಜನರಿಗೆ ಕೊಡುವ ಗೌರವ ಇದೇನಾ?. ಕಾವೇರಿ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾದೇಗೌಡರು, ಅಂಬರೀಶ್ ರಾಜೀನಾಮೆ ಕೊಟ್ಟಿದ್ದರು. ಅದೇ ರೀತಿ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರ? ಎಂದು ಪ್ರಶ್ನಿಸಿದರು.
ಸರ್ವಪಕ್ಷ ಸಭೆ ಕರೆದ ತಕ್ಷಣ ಎಲ್ಲರ ಅಭಿಪ್ರಾಯ ಕೇಳಬೇಕು ಅಂತ ಇಲ್ಲ. ಇವರು ಸಿಎಂ ಆಗಿದ್ದಾಗ ಎಲ್ಲರ ಮಾತು ಕೇಳುತ್ತಿದ್ದರಾ?. ಅವರನ್ನು ವೀಳ್ಯ ಕೊಟ್ಟು ಕರೆಯಲ್ಲ, ಎಲ್ಲರನ್ನೂ ಕರೆದಂತೆ ಕರೆದಿದ್ದೇವೆ. ಯಾರು ಬಂದರೂ, ಬರದಿದ್ದರೂ ಸರ್ಕಾರ ತೀರ್ಮಾನ ಮಾಡಲಿದೆ. ಕಾವೇರಿ ವಿಚಾರ ಮುಂದಿಟ್ಟುಕೊಂಡು ಬಹುಮತದಲ್ಲಿ ಗೆದ್ದು, ಸಭೆಗೆ ಬಾರದೇ ಇದ್ದದ್ದು ಮಂಡ್ಯ ಜನರಿಗೆ ತೋರಿದ ಅಗೌರವ. ಕಾವೇರಿ ವಿವಾದ ಬಗೆಹರಿಸುವುದಾಗಿ ಹೇಳಿ ಈಗ ಅಗೌರವ ತೋರಿದ್ದಾರೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ; ನದಿ ಕಡೆ ತೆರಳದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ - KARNATAKA RAIN UPDATE