ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಮಾತನಾಡಿದರು (ETV Bharat) ಕಾರವಾರ (ಉತ್ತರ ಕನ್ನಡ) : ಜಿಲ್ಲೆಯ ಹಿರಿಯ ರಾಜಕಾರಣಿ ಆರ್. ವಿ ದೇಶಪಾಂಡೆ ಮುಖ್ಯಮಂತ್ರಿಯಾದರೆ ಖುಷಿ ಪಡುವ ಮೊದಲಿಗರಲ್ಲಿ ನಾನೂ ಒಬ್ಬ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಆರ್. ವಿ ದೇಶಪಾಂಡೆ ಅನೇಕ ವರ್ಷಗಳಿಂದ ಆಪ್ತರಾಗಿದ್ದಾರೆ. ಸಿದ್ದರಾಮಯ್ಯ ಅವರು ದೇಶಪಾಂಡೆ ಅವರಿಗೆ ಮುಖ್ಯಮಂತ್ರಿ ಆಗಿ ಎಂದು ಹೇಳಿರಬಹುದು ಎಂದು ನಾನು ಭಾವಿಸಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯದ ಮಟ್ಟಿಗೆ ಇಲ್ಲ. ಇಬ್ಬರ ನಡುವೆ ತುಂಬಾ ಅನ್ಯೋನ್ಯವಾದ ಸಂಬಂಧವಿದೆ. ನೀನು ನನ್ನ ಸ್ನೇಹಿತ, ನೀನೇ ಮುಂದೆ ಸಿಎಂ ಆಗಪ್ಪ, ನೀನು ಆದರೆ ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ದೇಶಪಾಂಡೆ ಅವರಿಗೆ ಹೇಳಿರಬೇಕು. ಕಾಂಗ್ರೆಸ್ ಹೈಕಮಾಂಡ್‌ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ. ಹೀಗಿರುವಾಗ ಇಂತಹ ಆಲೋಚನೆ ಬರಲು ಸಾಧ್ಯವೇ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಸ್ಥಾನಕ್ಕೆ ದೇಶಪಾಂಡೆ ಅರ್ಹರಿದ್ದಾರೆ : ಕಾಂಗ್ರೆಸ್ ಮುಖಂಡ ಆರ್. ವಿ ದೇಶಪಾಂಡೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕರೆ ಖುಷಿ ಪಡುವವರ ಲಿಸ್ಟ್ನಲ್ಲಿ ಮೊದಲಿಗ ನಾನೇ ಇರುತ್ತೇನೆ. ನನ್ನ ಜತೆಗೆ ಎರಡನೇಯವರಾಗಿ ಕಾರವಾರ ಶಾಸಕ ಸತೀಶ್ ಶೈಲ್ ಇರುತ್ತಾರೆ. ನಾವಿಬ್ಬರೂ ಖುಷಿ ಪಡ್ತೇವಿ. ಆದರೆ ಸದ್ಯಕ್ಕೆ ಪಕ್ಷದ ಹೈಕಮಾಂಡ್ ಹಾಗೂ ಸಾಮಾನ್ಯ ಕಾರ್ಯಕರ್ತರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ. ದೇಶಪಾಂಡೆ ಅವರನ್ನು ಸಿಎಂ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೂ ಚರ್ಚೆಯೂ ಆಗಲಿಲ್ಲ. ನಮ್ಮ ಬಳಿ ಈ ಬಗ್ಗೆ ಅಭಿಪ್ರಾಯವನ್ನೂ ಪಡೆಯಲಿಲ್ಲ. ಮಾಧ್ಯಮದಿಂದಲೇ ನನಗೆ ವಿಷಯ ತಿಳಿದಿದೆ. ಸಿಎಂ ಸ್ಥಾನಕ್ಕೆ ದೇಶಪಾಂಡೆ ಅರ್ಹರಿದ್ದಾರೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳನ್ನು ಅರ್ಹರು ಪಡೆಯಬೇಕು: ಗೃಹಲಕ್ಷ್ಮಿ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಉಳ್ಳವರೂ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅವರು ಸ್ವಯಂ ಪ್ರೇರಿತರಾಗಿ ಈ ಯೋಜನೆಯಿಂದ ಹಿಂದೆ ಸರಿಯಬೇಕಿತ್ತು. ಆದರೆ, ಅವರು ಹಿಂದೆ ಸರಿಯದೇ ಇರುವುದರಿಂದ ಉಳ್ಳವರಿಗಿಂತ ಬಡವರಿಗೇ ಈ ಯೋಜನೆಯಿಂದ ಹೆಚ್ಚಿನ ಲಾಭ ಸಿಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಅವರು ತಿಳಿಸಿದರು. ಸರ್ಕಾರದ ಯೋಜನೆಗಳನ್ನು ಅರ್ಹರು ಪಡೆಯಬೇಕು. ಉಳ್ಳವರು ಈ ಯೋಜನೆಯ ಲಾಭ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಇದನ್ನೂ ಓದಿ :ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದರೆ ಅದನ್ನು ಹೈಕಮಾಂಡ್ ನಿಭಾಯಿಸುತ್ತೆ: ಜಿ ಪರಮೇಶ್ವರ್ - Home Minister G Parameshwar