ಶಿವಮೊಗ್ಗ: ವರದಾ ನದಿ ಪ್ರವಾಹ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲೆಯ ಸಾಗರ, ಸೊರಬ ತಾಲೂಕಿನಲ್ಲಿ ವರದಾ ನದಿಯಿಂದ ಹಾನಿಯುಂಟಾದ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಾನು ಶನಿವಾರ ಸಂಜೆ ಹಾಗೂ ಭಾನುವಾರ ಬೆಳಗ್ಗೆ ಒಟ್ಟು ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ನನ್ನ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದೆ. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೂ ಭೇಟಿ ನೀಡುತ್ತಿದ್ದೇನೆ. ಜನರಿಗೆ ನಾನು ಮನವಿ ಮಾಡ್ತೇನೆ, ಸ್ವಲ್ಪ ಜಾಗರೂಕತೆಯಿಂದ ಇರಬೇಕು ಎಂದರು.
ಡಿಸಿ, ಸಿಇಒ ಮತ್ತು ತಹಶೀಲ್ದಾರ್ಗೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಮಳೆಯಿಂದ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದೇನೆ. ಕೆಲ ಮನೆ ಅನಧಿಕೃತವಾಗಿ ಕಟ್ಟಿರುತ್ತಾರೆ. ಇವರಿಗೆ ಪರಿಹಾರ ನೀಡಲು ಸಮಸ್ಯೆ ಎದುರಾಗುತ್ತದೆ. ಇದರ ಬಗ್ಗೆ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವರ ಜೊತೆ ಚರ್ಚೆ ಮಾಡಬೇಕಿದೆ. ವರದಾ ನದಿಯಿಂದ ಸಾಕಷ್ಟು ಹಾನಿಯಾಗಿದೆ. ಬೆಳೆ ಎಲ್ಲಾ ನೀರು ಪಾಲಾಗಿವೆ. ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಬಾರಿ ಮಳೆ ಕೊರತೆ ಎದುರಾಗಿತ್ತು. ಈ ಬಾರಿ ಭಾರೀ ಮಳೆಯಾಗುತ್ತಿದ್ದು, ಇದನ್ನು ಎದುರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಎಲ್ಲಾ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಮಳೆಯಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಜನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮನೆ ಬಿದ್ದವರಿಗೆ ಹೊಸ ಮನೆ ಕಟ್ಟಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.