ಬೆಂಗಳೂರು:ರಾಜ್ಯಕ್ಕೆ GST, ಸೆಸ್ ಹಾಗೂ ಬರ ಪರಿಹಾರ ವಿಳಂಬ ವಿಚಾರವಾಗಿ ಬಹಿರಂಗ ಚರ್ಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ಸಂಜೆ ನಗರದ ಗಾಂಧಿ ಭವನದಲ್ಲಿ ವೇದಿಕೆ ಸಜ್ಜುಗೊಳಿಸಿದ್ದರು. ಬಹಿರಂಗ ಚರ್ಚೆಗಾಗಿ ಸಿದ್ಧಪಡಿಸಲಾದ ವೇದಿಕೆಯಲ್ಲಿ ಕೇಂದ್ರ ವಿತ್ತ ಸಚಿವೆಗಾಗಿ ಕೆಲ ಹೊತ್ತು ಕಾದು ಕುಳಿತ ಕಂದಾಯ ಸಚಿವರು ಬಳಿಕ ತೆರಿಗೆ ಅನ್ಯಾಯದ ಕುರಿತು ಸಾರ್ವಜನಿಕರ ಜೊತೆ ಸಂವಾದ ನಡೆಸಿದರು.
ತೆರಿಗೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸುವ ಸಲುವಾಗಿ ಜಾಗೃತ ಕರ್ನಾಟಕ ಹಾಗೂ ರಾಜ್ಯ ರೈತ ಸಂಘ ಆಯೋಜಿಸಿದ್ದ ''ಜಿಎಸ್‌ಟಿ, ಸೆಸ್, ತೆರಿಗೆ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ'' ಬಹಿರಂಗ ಚರ್ಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕಾಗಿ ಗಾಂಧಿ ಭವನದಲ್ಲಿ ಏರ್ಪಡಿಸಲಾದ ವೇದಿಕೆಯಲ್ಲಿ ವಿತ್ತ ಸಚಿವೆಗಾಗಿ ಆಸನವನ್ನೂ ಕಾಯ್ದಿರಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.
ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ''ನನ್ನ ಹಾಗೂ ಸೀತಾರಾಮನ್ ನಡುವೆ ಯಾವುದೇ ತಕರಾರು ಇಲ್ಲ. ಅವರ ಬಗ್ಗೆ ನನಗೆ ವೈಯಕ್ತಿಕ ಗೌರವ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಕಳೆದ 10 ವರ್ಷಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ಅವಶ್ಯಕತೆಗೆ ತಕ್ಕ ತೆರಿಗೆ ಪಾಲು ಸಿಗುತ್ತಿಲ್ಲ. ಆದರೆ, ಅದಕ್ಕೆ ಪರಿಹಾರ ನೀಡುವ ಬದಲು ನಮ್ಮ ಹಕ್ಕು ಕೇಳಿದರೆ ನಮ್ಮನ್ನೇ ಅವಮಾನಿಸಲಾಗುತ್ತಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಮತ್ತದೇ ಸುಳ್ಳಿನ ಜುಮ್ಲಾ ಭಾಷಣ ಮಾಡುವುದು ಎಷ್ಟು ಸರಿ?'' ಎಂದು ಪ್ರಶ್ನಿಸಿದರು.
ರಾಜ್ಯಕ್ಕಾಗುತ್ತಿರುವ ಜಿಎಸ್‌ಟಿ ಮೋಸ:''ಜಿಎಸ್‌ಟಿ ಜಾರಿಯಾಗುವ ಮೊದಲು ಮೌಲ್ಯವರ್ಧಿತ ತೆರಿಗೆ ಜಾರಿಯಲ್ಲಿತ್ತು. ರಾಜ್ಯಕ್ಕೆ ಸ್ವಾಯತ್ತತೆ ಇತ್ತು. ಆದರೆ, ಪ್ರಸ್ತುತ ರಾಜ್ಯಗಳಿಗೆ ತೆರಿಗೆ ಸ್ವಾಯತ್ತತೆ ಇಲ್ಲದಂತಾಗಿದೆ. ಕರ್ನಾಟಕಕ್ಕೆ ಪ್ರತಿ ವರ್ಷ ಶೇ.15 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹದ ಸಾಮರ್ಥ್ಯ ಇತ್ತು. ಆದರೆ, ಜಿಎಸ್‌ಟಿ ಜಾರಿಯಾದ ಮೇಲೆ ನಮ್ಮಂತ ರಾಜ್ಯಗಳ ತೆರಿಗೆ ಕಡಿಮೆಯಾಗುತ್ತಿದೆ. ಜಿಎಸ್‌ಟಿ ಜಾರಿಯಾದ ನಂತರ 2019-20ರಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ರೂ.18,897 ಕೋಟಿ ಖೋತಾ ಆಗಿದೆ. 2023-24ರಲ್ಲಿ ರೂ.34,570 ಕೋಟಿ ನಷ್ಟವಾಗಿದೆ. ರಾಜ್ಯದ ಆದಾಯದಲ್ಲಿ ಪ್ರತಿ ವರ್ಷ 30 ರಿಂದ 32 ಸಾವಿರ ಕೋಟಿ ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ತುಂಬಿ ಕೊಡಬೇಕು ಎಂದು ಹಣಕಾಸು ಆಯೋಗ ಸ್ಪಷ್ಟವಾಗಿ ನಿರ್ದೇಶನ ನೀಡಿದೆ'' ಎಂದರು.
''2020-21 ರಲ್ಲಿ ರಾಜ್ಯಕ್ಕೆ ರೂ.5,495 ಕೋಟಿ ಹಾಗೂ 2021-26ರ ಅವಧಿಯಲ್ಲಿ ರೂ.6,000 ಕೋಟಿ ಪರಿಹಾರ ನೀಡಬೇಕು ಎಂದು 15ನೇ ಹಣಕಾಸು ಆಯೋಗ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ಈ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೆ, ಈ ವರ್ಷದಿಂದ ಒಂದು ನಯಾಪೈಸೆಯೂ ಜಿಎಸ್‌ಟಿ ಪರಿಹಾರ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಜಿಎಸ್‌ಟಿ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೆವು. ಆದರೆ, ಸೀತಾರಾಮನ್ ಅದನ್ನು ನಿರಾಕರಿಸಿದ್ದಾರೆ'' ಎಂದು ಅಸಮಾಧಾನ ಹೊರಹಾಕಿದರು.
''ಈ ಹಿಂದೆ ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಶೇ.4.713 ರಷ್ಟು ತೆರಿಗೆ ಪಾಲು ಇತ್ತು. ಆದರೆ, 15ನೇ ಹಣಕಾಸು ಆಯೋಗ ಈ ಪ್ರಮಾಣವನ್ನು 3.617 ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ಶೇ.23 ರಷ್ಟು ಹಣ ಕಡಿಮೆಯಾಗಿದೆ. ಅಂದ್ರೆ ಪ್ರತಿ ವರ್ಷ 6 ರಿಂದ 13 ಸಾವಿರ ಕೋಟಿ ನಷ್ಟ. ಇದರಿಂದ ರಾಜ್ಯಕ್ಕೆ ಈವರೆಗೆ ಒಟ್ಟಾಗಿ ರೂ.62,098 ಕೋಟಿ ನಷ್ಟ ಉಂಟಾಗಿದೆ. ದೇಶದ 31 ರಾಜ್ಯಕ್ಕಿಂತ ಕರ್ನಾಟಕಕ್ಕೆ ಮಾತ್ರ ಇಷ್ಟು ಕಡಿಮೆ ಪ್ರಮಾಣದ ತೆರಿಗೆ ಹಂಚಿಕೆ ಮೋಸ ಏಕೆ? ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಇದು ಕೇಂದ್ರ ಸರ್ಕಾರ ನೀಡುವ ಉಡುಗೊರೆಯಾ?'' ಎಂದು ಅವರು ಪ್ರಶ್ನಿಸಿದರು.
''ಕೇಂದ್ರ ಸರ್ಕಾರ ಸಂಗ್ರಹಿಸುವ ಸೆಸ್ ಸರ್ಚಾರ್ಜ್ ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು. ಆದರೆ, 2020ರಲ್ಲಿ ರಾಜ್ಯಗಳಿಗೆ ಪಾಲು ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಮಾಡಿ ಮಾಡಿದೆ. ಹೀಗಾಗಿ ಈ ವಿಚಾರದಲ್ಲೂ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ'' ಎಂದು ಗರಂ ಆದರು.