ಚಾಮರಾಜನಗರ: "ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ" ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ನೂತನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಉದ್ಘಾಟನೆ ನೆರವೇರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬದಲಾಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ," ಕುರ್ಚಿ ಖಾಲಿ ಆಗಿದ್ಯಾ?. ಸದ್ಯ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ, ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರೆಯುತ್ತೇವೆ" ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಮಾತನಾಡಿ, "ವಿದೇಶಕ್ಕೆ ಹೋದರೆ ತಪ್ಪೇನಿದೆ, ಸ್ನೇಹಿತರ ಜತೆ ಊಟಕ್ಕೆ ಹೋಗುವುದು, ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿದೆ" ಎಂದು ಪ್ರಶ್ನಿಸಿದರು.
ಸಿ.ಟಿ. ರವಿ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ:ಗೃಹ ಸಚಿವ ಪರಮೇಶ್ವರ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ," ಸಿ.ಟಿ. ರವಿಯವರಿಗೆ ಮಾಡೋಕೆ ಏನು ಕೆಲಸ ಇಲ್ಲ, ಅವರು ಅಪರಾಧ ಮಾಡಿದ್ದಾರೆ. ಆ ಅಪರಾಧಕ್ಕೆ ಅವರು ಉತ್ತರ ಕೊಡಲಿ, ಶಿಕ್ಷೆ ಅನುಭವಿಸಲಿ. ಜನಪ್ರತಿನಿಧಿಯಾಗಿ ಮಹಿಳೆಯ ಬಗ್ಗೆ ಅಗೌರವಯುತವಾಗಿ ಮಾತನಾಡಿ, ಅವಾಚ್ಯ ಶಬ್ಧಗಳನ್ನು ಉಪಯೋಗ ಮಾಡಿರುವ ಅವರಿಗೆ ಏನಾದರೂ ನೈತಿಕತೆ ಇದೆಯಾ?. ಸಿ.ಟಿ. ರವಿ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ" ಎಂದು ಹೇಳಿದರು.