ಬೆಂಗಳೂರು:ಪ್ರತಿಷ್ಠೆಯ ಕಣವಾಗಿರುವಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಒಂದು ವಾರವೇ ಪ್ರಚಾರ ಮಾಡಲಿ. ಸರ್ವೋಚ್ಚ ನಾಯಕರಾಗಿದ್ರು ಅವರೇ ಸೋತಿಲ್ವ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರು ಒಂದು ವಾರ ವಾಸ್ತವ್ಯ ಹೂಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಪ್ರಚಾರ ಮಾಡಬೇಡಿ ಅನ್ನೋಕಾಗುತ್ತಾ?. ಸೋಲು ಗೆಲುವನ್ನ ಜನತೆ ಆ ಕ್ಷಣ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಮೂರು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ; ಚನ್ನಪಟ್ಟಣ ವಿಧಾನಸಭೆ ಚುನಾವಣೆಗೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಸಿಎಂ ಬದಲಾವಣೆ ವಿಚಾರ ಇದೀಗ ಅಪ್ರಸ್ತುತ. ಅದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಚನ್ನಪಟ್ಟಣ ಸೇರಿದಂತೆ ನಾವು ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.