ಮಂಡ್ಯ : ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಅಭ್ಯರ್ಥಿ ಯಾರು? ಎಂಬ ಗೊಂದಲದ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ಅಬ್ಬರ ಜೋರಾಗಿದೆ. ಮಂಡ್ಯ ಚುನಾವಣಾ ಕಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬರೋದು ಫಿಕ್ಸ್ ಆಗ್ತಿದ್ದಂತೆ ಕಾಂಗ್ರೆಸ್‌ನ ಚುನಾವಣಾ ರಣತಂತ್ರ ಕೂಡ ಬದಲಾಗಿದೆ.
ಹೌದು, ಮಂಡ್ಯ ರಾಜಕಾರಣ ಅಂದರೆ ಅದು ಡಿಫರೆಂಟ್. ಇಲ್ಲಿ ನಡೆಯುವ ಪ್ರತಿ ಚುನಾವಣೆಯೂ ರೋಚಕ. ಈ ಬಾರಿಯ ಲೋಕಸಭಾ ಚುನಾವಣೆ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಾರಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಒಂದು ಕಡೆಯಾದರೆ, ಕಳೆದ ಬಾರಿ ಸ್ವಾಭಿಮಾನದ ಹೆಸರಲ್ಲಿ ರಣಕಹಳೆ ಮೊಳಗಿಸಿದ್ದ ಸಂಸದೆ ಸುಮಲತಾ ಅವರ ಮುಂದಿನ ನಡೆಯತ್ತ ಕೂಡ ಎಲ್ಲರ ಚಿತ್ತ ನೆಟ್ಟಿದೆ.
ಮಂಡ್ಯ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೂ, ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದೆ. ಹೆಚ್ಡಿಕೆ ಮಂಡ್ಯ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದರಿಂದ ಅವರನ್ನ ಎದುರಿಸೋಕೆ ಕಾಂಗ್ರೆಸ್ ಕೂಡ ರಣತಂತ್ರ ರೂಪಿಸ್ತಿದೆ. ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಅವರನ್ನು ಕಟ್ಟಿ ಹಾಕೋಕೆ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದೆ.
ಈಗಾಗಲೇ ಜೆಡಿಎಸ್‌ನಿಂದ ಬೇಸತ್ತು ಹಲವರು ಕೈ ಹಿಡಿದಿದ್ರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಮುನಿಸಿಕೊಂಡಿರೋ ಮಾಜಿ ಸಚಿವ ಕೆ. ಸಿ ನಾರಾಯಣಗೌಡರಿಗೂ ಕೈ ನಾಯಕರು ಗಾಳ ಹಾಕಿದ್ದಾರೆ. ಮಾಜಿ ಸಚಿವ ಕೆ. ಸಿ ನಾರಾಯಣಗೌಡ ಮತ್ತು ಅವರ ಅಪಾರ ಬೆಂಬಲಿಗರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರೋ ಬಗ್ಗೆ ಸಚಿವ ಚಲುವರಾಯಸ್ವಾಮಿ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕುಮಾರಸ್ವಾಮಿ ಒಂದು ಕಡೆ ಹೋದಾಗ ಅದು ನನ್ನ ಕರ್ಮ ಭೂಮಿ ಅಂತಾರೆ. ಅದೇ ರೀತಿ ಮಂಡ್ಯ, ಚನ್ನಪಟ್ಟಣ ಕರ್ಮ ಭೂಮಿ ಅಂತಾರೆ. ಕುಮಾರಸ್ವಾಮಿ ರಾಜ್ಯದ ನಾಯಕ. ದೇವೇಗೌಡರ ಮಗ ಅವರು. ಅವರ ಬಗ್ಗೆ ಗೌರವವಿದೆ. ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಬೇರೆ ಜಿಲ್ಲೆಯವರಿಗೆ ಭಾವನಾತ್ಮಕವಾಗಿ ಅವಕಾಶ ನೀಡಿಲ್ಲ. ರಾಮನಗರ ಪೂರ್ತಿ ತಿರಸ್ಕಾರ ಮಾಡ್ತಾರೋ ಅಥವಾ ಅಲ್ಲಿಯೇ ಅರ್ಧ ಬಿಟ್ಟು ಇಲ್ಲಿಗೆ ಬರ್ತಾರೋ ಗೊತ್ತಿಲ್ಲ. ಇಲ್ಲ ಕೊನೆ ಘಳಿಗೆಯಲ್ಲಿ ಯಾರನ್ನಾದರೂ ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಮಾಡಿದ ಜಿಲ್ಲೆ ರಾಮನಗರ. ಅಂತಹ ಜಿಲ್ಲೆಯನ್ನು ಪ್ರಾಣ ಹೋಗುವವರೆಗೆ ಬಿಟ್ಟು ಹೋಗಲ್ಲ ಅಂತಾ ಹೇಳ್ತಾ ಇದ್ರು. ಈಗ ಮಂಡ್ಯಗೆ ಹೋಗ್ತಾ ಇದಾರೆ ಎಂದು ರಾಮನಗರ ಜಿಲ್ಲೆಯವರು ಹೇಳ್ತಾ ಇದ್ದಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದರು ನಮ್ಮ ಚುನಾವಣೆ ನಾವು ಮಾಡ್ತೀವಿ. ನಾವು ಜನರ ಮುಂದೆ ನಮ್ಮ ಕೆಲಸ ಇಟ್ಟುಕೊಂಡು ಹೋಗ್ತೀವಿ. ಮಂಡ್ಯ ಜನರು ಸೂಕ್ಷ್ಮ ಹಾಗೂ ಬುದ್ದಿವಂತರು ಎಂದು ಹೆಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.
ಮಂಡ್ಯ ಕಾಂಗ್ರೆಸ್‌ನ ಕೆಲ ನಾಯಕರು ಸುಮಲತಾರನ್ನ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಮನವೊಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅವರು ಚುನಾವಣೆಗೆ ನಿಂತರೆ ಅಷ್ಟೇ ಸಾಕು. ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನ ನಾವೇ ಬರಿಸಲು ಸಿದ್ಧರಿದ್ದೇವೆ. ಸುಮಲತಾ ಚುನಾವಣಾ ಕಣದಲ್ಲಿದ್ದರೆ ಜೆಡಿಎಸ್ ಮತ್ತು ಬಿಜೆಪಿ ಮತಗಳು ವಿಭಾಗವಾಗಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತೆ ಅನ್ನೋ ಲೆಕ್ಕಾಚಾರ ಕೈ ಪಾಳಯದ್ದಾಗಿದೆಯಂತೆ. ಹೀಗಾಗಿ, ಕಾಂಗ್ರೆಸ್ ನಾಯಕರ ಪ್ರಯತ್ನ ಯಶಸ್ವಿಯಾಗುತ್ತಾ? ಸುಮಲತಾರ ಮುಂದಿನ ನಡೆ ಏನು? ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.
ನಾವು ಅವರೊಂದಿಗೆ ರಾಜಕೀಯವಾಗಿ ಮಾತನಾಡಿಲ್ಲ:ಆದರೆ ಈ ಕುರಿತು ಮಾತನಾಡಿದ ಸಚಿವರು, ನಾವು ಯಾರನ್ನೋ ಸೋಲಿಸಲು ಇನ್ಯಾರನ್ನೋ ನಿಲ್ಲಿಸುತ್ತಿಲ್ಲ. ಸುಮಲತಾ ಅವರನ್ನು ಪಕ್ಷೇತರವಾಗಿ ನಿಲ್ಲಿ ಎಂದು ಹೇಳಿಲ್ಲ. ಸುಮಲತಾ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಲ್ಲ. ಅವರ ನಿಲುವುಗಳ ಬಗ್ಗೆ ನಾನು ಯಾವತ್ತು ಪ್ರಶ್ನೆ ಮಾಡಿಲ್ಲ. ಅವರು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಲಿ. ಅವರು ನಮಗೆ ಬೆಂಬಲ ಕೊಡ್ತೀನಿ ಎಂದರೆ ಕೊಡಲಿ. ಐದು ವರ್ಷ ಸ್ವತಂತ್ರ ಎಂಪಿ ಬೆಂಬಲ ಕೊಟ್ಟರೆ ಏಕೆ ಬೇಡ ಎನ್ನೋದು ಎಂದರು.
ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆಯ ನೇತೃತ್ವ ವಹಿಸಿರೋ ಸಚಿವ ಎನ್. ಚಲುವರಾಯಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರನ್ನ ಚುನಾವಣೆಗೆ ಸಜ್ಜುಗೊಳಿಸುವಲ್ಲಿ ಸನ್ನದ್ಧರಾಗಿದ್ದಾರೆ. ಅಭ್ಯರ್ಥಿ ಸ್ಟಾರ್ ಚಂದ್ರು ಜೊತೆ ನಿತ್ಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸ್ತಿದ್ದಾರೆ. ಇಂದಿನಿಂದ ಆರಂಭವಾಗಿರೋ ಕ್ಷೇತ್ರವಾರು ಕಾರ್ಯಕರ್ತರ ಸಭೆಗೆ ಶ್ರೀರಂಗಪಟ್ಟಣದಲ್ಲಿಂದು ಸ್ವತಃ ಚಲುವರಾಯಸ್ವಾಮಿ ಚಾಲನೆ ನೀಡಿದ್ರು. ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಸಲಹೆ, ಸೂಚನೆ ನೀಡಿದ್ರು.
ಒಟ್ಟಾರೆ ಕಳೆದ ಲೋಕಸಭಾ ಚುನಾವಣೆಯಂತೆ ಮಂಡ್ಯ ಕ್ಷೇತ್ರ ಈ ಬಾರಿಯೂ ಎಲ್ಲರ ಕೇಂದ್ರ ಬಿಂದುವಾಗಿದೆ. ಮಂಡ್ಯ ಮೈತ್ರಿ ಅಭ್ಯರ್ಥಿ ಯಾರು? ಅನ್ನೋ ಗೊಂದಲಕ್ಕೆ ಬಹುತೇಕ ನಾಳೆ ತೆರೆ ಬೀಳುವ ಸಾಧ್ಯತೆ ಇದೆ. ಇದರ ನಡುವೆಯೇ ಸಂಸದೆ ಸುಮಲತಾರ ಮುಂದಿನ ನಡೆ ನಿಗೂಢವಾಗಿದ್ದು, ಅವರ ನಿಲುವು ಏನು ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ :ಹೆಚ್ಡಿಕೆ ಮುಖ್ಯಮಂತ್ರಿ ಆಗಲು ನಮ್ಮ ಬಳಿ ಕೈ ಕಟ್ಟಿ ನಿಂತಿದ್ದರು: ಸಚಿವ ಚಲುವರಾಯಸ್ವಾಮಿ