ಮಂಡ್ಯ:"ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಮತ್ತು ಮಹಾರಾಷ್ಟ್ರ ಎಲೆಕ್ಷನ್ ಮುಂದಿಟ್ಟುಕೊಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೂರಾರು ಕಂಪನಿಗಳಿಂದ ಸಾವಿರಾರು ಕೋಟಿ ಹಣ ಕಲೆಕ್ಟ್ ಮಾಡಿರುವುದು ಸತ್ಯ" ಎಂದು ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲಲ್ಲ. ಉಪ ಚುನಾವಣೆಯಲ್ಲಿ ದುಡ್ಡಿನಲ್ಲಿ ಅವರ ಜೊತೆ ಫೈಟ್ ಮಾಡಲಾಗಲಿಲ್ಲ. ನಮ್ಮ ಬಳಿ ಹಣವಿಲ್ಲ, ಗ್ಯಾರಂಟಿ ನೀಡಿದ್ದೇವೆ ಎಂದು ಜನರ ಬಳಿ ಮತ ಕೇಳಿದ್ದೇವೆ. 40 ಪರ್ಸೆಂಟ್ ಹಗರಣ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಹೋಯ್ತು. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮತ್ತೆ ಪ್ರಯತ್ನ ಮಾಡುತ್ತಿದೆ" ಎಂದು ಕಿಡಿಕಾರಿದರು.
"ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೆ ಇದೂ ಕೂಡ ಪ್ರೂವ್ ಆಗಿದೆ. ಇದು ಮೊದಲ ಬಾರಿ ಅಲ್ಲ. ಇವರು ಆಪರೇಷನ್ ಕಮಲ ಮಾಡ್ತಿರೋದು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದೇ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಲು ಆಪರೇಷನ್ ಕಮಲ ಮಾಡಿದ್ದರು" ಎಂದು ದೂರಿದರು.
"ಎಷ್ಟು ಹಣ ಕೊಟ್ರೋ ಚುನಾವಣೆಗೆ ಎಷ್ಟು ಹಾಕಿದ್ರೋ ಅದು ನನಗೆ ಗೊತ್ತಿಲ್ಲ. ಆಗ ಆಪರೇಷನ್ ಕಮಲಕ್ಕೆ ಒಳಗಾದವರು, ಹಣ ಖರ್ಚು ಮಾಡದೇ ಚುನಾವಣೆ ಮಾಡಿಲ್ಲ. ಹಣ ಪಡೆಯದೇ ಅವರು ಕಾಂಗ್ರೆಸ್-ಜೆಡಿಎಸ್ ನಿಂದ ಬಿಜೆಪಿಗೆ ಹೋಗಿಲ್ಲ. ಈಗ ಈ ಬಹುಮತದ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ - ಜೆಡಿಎಸ್ ನವರು ಈ ಸರ್ಕಾರ ಉಳಿಯಲ್ಲ ಅಂತಿದ್ದಾರೆ. ಹಾಗಾದರೆ ಆಪರೇಷನ್ ಕಮಲದ ಉದ್ದೇಶದಿಂದಲೇ ಈ ರೀತಿ ಹೇಳಿರೋದು ಅನಿಸುತ್ತೆ" ಎಂದರು.