ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ದಾರದಹಳ್ಳಿ ಮೆಸ್ಕಾಂ ಉಪವಿಭಾಗದ ಕಿರಿಯ ಎಂಜಿನಿಯರ್ (ಜೆಇ) ಮಂಜುನಾಥ್ ಎಂಬವರು ವಿದ್ಯುತ್ ಗುತ್ತಿಗೆದಾರರಿಂದ 15 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ಬಂಧಿಸಿದ್ದಾರೆ.
ಮಂಜುನಾಥ್ ವಿದ್ಯುತ್ ಸಂಪರ್ಕ ಕಾಮಗಾರಿಯೊಂದಕ್ಕೆ ಅನುಮೋದನೆ ನೀಡಲು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ವಿದ್ಯುತ್ ಗುತ್ತಿದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರ ಉಮೇಶ್ ಮತ್ತು ಕೆ.ಸತೀಶ್ ಅವರಿಂದ ಮಂಜುನಾಥ್ 15 ಸಾವಿರ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತರ ಅಧಿಕಾರಿಗಳ ತಂಡ ದಿಢೀರ್ ದಾಳಿ ಮಾಡಿ ಬಂಧಿಸಿದೆ. ಲೋಕಾಯುಕ್ತ ಅಧಿಕಾರಿ ಅನಿಲ್ ರಾಥೋಡ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಮಂಜುನಾಥ್ ದಾರದಹಳ್ಳಿ ಮೆಸ್ಕಾಂ ಘಟಕದಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯುತ್ ಗುತ್ತಿಗೆದಾರರ ವಲಯದಲ್ಲಿ ಹಲವು ಆರೋಪಗಳಿವೆ. ಪ್ರತಿಯೊಂದು ಕಾಮಗಾರಿಯ ಕಡತಗಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ.
ಕೆಲವೊಂದು ಕಾಮಗಾರಿಗಳನ್ನು ಗುತ್ತಿಗೆದಾರರನ್ನು ಬಿಟ್ಟು ತಾವೇ ನೇರವಾಗಿ ವಹಿಸಿಕೊಂಡು ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದರು. ಸರ್ಕಾರಿ ಕಾಮಗಾರಿಗಳಿಗೆ ಬಂದಿದ್ದ ವಿದ್ಯುತ್ ಕಂಬ ಸೇರಿದಂತೆ ಇತರೆ ಉಪಕರಣಗಳನ್ನು ದುರ್ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಗುತ್ತಿಗೆದಾರರಿಂದ ಆರೋಪ ಕೇಳಿಬಂದಿತ್ತು.
ಇದನ್ನೂಓದಿ:ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು