ಎಂಇಎಸ್ ಕಾರ್ಯಾಧ್ಯಕ್ಷ ರಂಜೀತ್ ಚವ್ಹಾಣ ಪಾಟೀಲ್ ಹೇಳಿಕೆ ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆಯ ಅಖಾಡಕ್ಕೆ ಎಂಇಎಸ್ ಎಂಟ್ರಿ ನೀಡಿರುವ ಹಿನ್ನೆಲೆಯಲ್ಲಿ ಮತಗಳ ವಿಭಜನೆ ಕಾಂಗ್ರೆಸ್, ಬಿಜೆಪಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಗೋಚರಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಎಂಇಎಸ್ ಕೂಡಾ ಪೈಪೋಟಿ ನೀಡಲು ಸಜ್ಜಾಗಿದೆ. ರಮಾಕಾಂತ ಕೊಂಡೋಸ್ಕರ್ ಹಾಗೂ ಇನ್ನೂ ಇಬ್ಬರ ಹೆಸರು ಪ್ರಸ್ತಾಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಎಂಇಎಸ್ ಫೈನಲ್ ಮಾಡಲಿದೆ.
ಮತ್ತೊಂದೆಡೆ, ಬಿಜೆಪಿಗೆ ಮರಾಠದಾರರು ಗಟ್ಟಿ ಮತಬ್ಯಾಂಕ್ ಆಗಿದ್ದಾರೆ. ಎಂಇಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಬಿಜೆಪಿಗೂ ಮತವಿಭಜನೆ ಆತಂಕವಿದೆ. ಎಂಇಎಸ್ ಚುನಾವಣೆಯಲ್ಲಿ ಯಾರಿಗೆ ದಾಳವಾಗುತ್ತದೆ ಎಂಬುದು ಈಗಿನ ಕುತೂಹಲ.
ಗಡಿ ವಿಚಾರ ಇತ್ಯರ್ಥಪಡಿಸುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಪ್ರಯೋಗಕ್ಕೆ ಎಂಇಎಸ್ ಮುಂದಾಗಿದೆ. ಹೀಗಾಗಿ, 1996ರಲ್ಲಿ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಅನ್ನು ಮತ್ತೊಮ್ಮೆ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದೆ. 1996ರಲ್ಲಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಚುನಾವಣಾ ಮತ ಪತ್ರ ಮುದ್ರಣ ಸೇರಿ ಆಯೋಗಕ್ಕೆ ಎಂಇಎಸ್ ಸ್ಪರ್ಧೆ ಚಿಂತೆಗೀಡು ಮಾಡಿತ್ತು. ಆಗ ಎರಡು ತಿಂಗಳ ಕಾಲ ಚುನಾವಣೆಯನ್ನು ಆಯೋಗ ಮುಂದೂಡಿತ್ತು.
ಎಂಇಎಸ್ ಕಾರ್ಯಾಧ್ಯಕ್ಷ ರಂಜೀತ್ ಚವ್ಹಾಣ ಪಾಟೀಲ್ ಮಾತನಾಡಿ, ನಿನ್ನೆ 700 ಎಂಇಎಸ್ ಸದಸ್ಯರ ಸಭೆ ಕರೆದಿದ್ದೆವು. ಈ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಮತಗಳು ಬೇರೆಡೆ ಚದುರಿ ಹೋಗಬಾರದು ಎಂಬ ಉದ್ದೇಶದಿಂದ ಲೋಕಸಭೆಗೆ ಎಂಇಎಸ್ ಸ್ಪರ್ಧಿಸುವುದಂತೂ ನಿಶ್ಚಿತ. ಆದರೆ, ಗಲ್ಲಿಗೆ ಒಬ್ಬರನ್ನು ನಿಲ್ಲಿಸುವ ದುಸ್ಸಾಹಸಕ್ಕೆ ಮತ್ತೆ ಕೈ ಹಾಕುವುದಿಲ್ಲ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳನ್ನೂ ನಾವು ಬೆಂಬಲಿಸುವುದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ನಾವು ಹೆಚ್ಚು ದೃಷ್ಟಿ ನೆಟ್ಟಿದ್ದು, ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯ ಮಾಡಿರೋದರಿಂದ ನಮಗೆ ಬಹಳಷ್ಟು ಸಮಸ್ಯೆ ಆಗಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ, ಅದು ಬಗೆಹರಿಯೋವರೆಗೂ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ - Dheeraj Prasad Joins Congress