ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಶೀಘ್ರದಲ್ಲೇ ಜೀನ್ಸ್ ಪಾರ್ಕ್ ಸ್ಥಾಪನೆ, 154 ಎಕರೆ ಭೂ ಸ್ವಾಧೀನ: ಸಚಿವ ಎಂ.ಬಿ.ಪಾಟೀಲ್ - BALLARI JEANS PARK

ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಮತ್ತು ರಫ್ತುದಾರರು ಬಳ್ಳಾರಿಯ ಜೀನ್ಸ್ ತಯಾರಿಕಾ ಉದ್ಯಮದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

mb-patil-says-154-acres-land-aquired-for-jeans-park-in-bellari
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Jan 9, 2025, 1:23 PM IST

ಬೆಂಗಳೂರು: ಕೆಐಎಡಿಬಿ ವತಿಯಿಂದ ಜಿಲ್ಲೆಯ ಸಂಜೀವರಾಯನ ಕೋಟೆಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕಾಗಿ ಈಗಾಗಲೇ 154 ಎಕರೆ ಜಮೀನನ್ನು ಸ್ವಾಧೀನಪಡಿಸಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ಉಡುಪು ತಯಾರಿಕಾ ಕಂಪನಿ ಸ್ಥಾಪನೆಗೆ ಅವಕಾಶ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿರುವ ಅವರು, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲಕಚ್ಚಿದೆ. ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಇದೀಗ ಬಳ್ಳಾರಿಯಲ್ಲಿನ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಬಿದ್ದಿದೆ. ಈ ಅವಕಾಶವನ್ನು ಬಳಸಿಕೊಂಡು ಹೂಡಿಕೆಯನ್ನು ಆಕರ್ಷಿಸಲಿದ್ದೇವೆ.

ಬಳ್ಳಾರಿಯಲ್ಲಿ 500ಕ್ಕಿಂತಲೂ ಹೆಚ್ಚು ಜೀನ್ಸ್ ಉಡುಪು ತಯಾರಿಕೆ ಘಟಕಗಳಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹತ್ತಾರು ಸಾವಿರ ಉದ್ಯೋಗಗಳನ್ನು ಸೃಷ್ಟಿಸಿವೆ. ಇದಕ್ಕೆ ವ್ಯವಸ್ಥಿತ ರೂಪ ಕೊಟ್ಟು, ಇದನ್ನು ರಫ್ತು ಕೇಂದ್ರಿತವಾಗಿಯೂ ಬೆಳೆಸಬೇಕು ಎಂಬುದು ಕೈಗಾರಿಕಾ ಇಲಾಖೆಯ ಚಿಂತನೆಯಾಗಿದೆ. ಇದಕ್ಕಾಗಿ ಜವಳಿ ಇಲಾಖೆಯ ಸಹಾಯವನ್ನೂ ಪಡೆಯಲಾಗುವುದು. ಆ ಇಲಾಖೆಯಲ್ಲಿ ಜೀನ್ಸ್ ತಯಾರಿಕೆ ಘಟಕಗಳಿಗೆ ರಿಯಾಯಿತಿ ಕೊಡುವ ವ್ಯವಸ್ಥೆ ಇದ್ದರೆ, ಅದನ್ನೂ ಕೊಡಿಸುವ ಕೆಲಸ ಮಾಡಲಾಗುವುದು. ಈ ಸಂಬಂಧ ಜವಳಿ ಸಚಿವರ ಜತೆಗೂ ಸಭೆ ನಡೆಸಲಾಗುವುದು ಎಂದು ಹೇಳಿದರು.

ಬಜೆಟ್​​ನಲ್ಲೂ ಪಾರ್ಕ್​ ಸ್ಥಾಪನೆ ಘೋಷಣೆ: ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಳ್ಳಾರಿಯ ಜೀನ್ಸ್ ತಯಾರಿಕೆ ಘಟಕಗಳ ಉದ್ಯೋಗಿಗಳು ಮತ್ತು ಮಾಲೀಕರ ಜೊತೆ ಮಾತುಕತೆ ನಡೆಸಿ, ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ಇದಾದ ಮೇಲೆ, 2023ರ ಆಗಸ್ಟ್ 1ರಂದು ನಮ್ಮ ಇಲಾಖೆಗೆ ಪತ್ರ ಬರೆದು, ಈ ಬಗ್ಗೆ ಗಮನ ಸೆಳೆದಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಈಗ ಅಸಂಘಟಿತವಾಗಿರುವ ಜೀನ್ಸ್ ಉದ್ಯಮಕ್ಕೆ ಸಂಘಟಿತ ರೂಪ ಕೊಟ್ಟು, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಬಳ್ಳಾರಿ ಜೀನ್ಸ್ ಪಾರ್ಕ್ ನಿಂದ ಪ್ರಾದೇಶಿಕ ಆರ್ಥಿಕತೆಗೆ ಚೈತನ್ಯ ಬರಲಿದೆ. ಇದರ ಜೊತೆಗೆ, ನಾವೀನ್ಯತೆ ಮತ್ತು ಉಡುಪು ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಆದ್ಯತೆ ಸಿಗಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಬಳ್ಳಾರಿ ಸುತ್ತಮುತ್ತ ಈಗಾಗಲೇ ಸಕ್ರಿಯವಾಗಿರುವ ಜೀನ್ಸ್ ಉಡುಪು ತಯಾರಿಕೆ ಘಟಕಗಳಿಗೂ ಹೆಚ್ಚಿನ ನೆರವು ನೀಡಲಾಗುವುದು. ಇಲ್ಲಿರುವ ಮಾರುಕಟ್ಟೆಯನ್ನು ನಾವು ಗುರಿಯಾಗಿಟ್ಟುಕೊಂಡು ದಾಪುಗಾಲಿಡಲಿದ್ದೇವೆ. ರಾಜ್ಯದ ಉದ್ಯಮ ಸ್ನೇಹಿ ಕೈಗಾರಿಕಾ ನೀತಿಯು ಇದಕ್ಕೆ ಮತ್ತಷ್ಟು ಇಂಬು ಕೊಡಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:ವಿಜಯನಗರದಲ್ಲಿ ಬಸ್ ನಿಲ್ದಾಣ ಖಾಲಿ‌ ಖಾಲಿ; ಬೀದರ್​ನಲ್ಲಿ ವ್ಯಾಪಾರ-ವಹಿವಾಟು ಸ್ಥಗಿತ

ABOUT THE AUTHOR

...view details