ಕರ್ನಾಟಕ

karnataka

ರಾಯಚೂರು: ಸಾಮೂಹಿಕ ವಿವಾಹ, ದಾಂಪತ್ಯಕ್ಕೆ ಕಾಲಿಟ್ಟ 225 ಜೋಡಿ

By ETV Bharat Karnataka Team

Published : Feb 18, 2024, 7:39 PM IST

Updated : Feb 18, 2024, 10:39 PM IST

ರಾಯಚೂರು ಜಿಲ್ಲೆಯ ಗಬ್ಬೂರು ಗ್ರಾಮದ ಸುಪ್ರಸಿದ್ಧ ಕ್ಷೇತ್ರ ಶ್ರೀಬೂದಿಬಸವ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಸಾಮೂಜಿಕ ವಿವಾಹ; ದಾಂಪತ್ಯಕ್ಕೆ ಕಾಲಿಟ್ಟ 225 ಜೋಡಿ
ಸಾಮೂಜಿಕ ವಿವಾಹ; ದಾಂಪತ್ಯಕ್ಕೆ ಕಾಲಿಟ್ಟ 225 ಜೋಡಿ

ಸಾಮೂಹಿಕ ವಿವಾಹ, ದಾಂಪತ್ಯಕ್ಕೆ ಕಾಲಿಟ್ಟ 225 ಜೋಡಿ

ರಾಯಚೂರು:ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿನ ಸುಪ್ರಸಿದ್ಧ ಕ್ಷೇತ್ರ ಗಬ್ಬೂರು ಶ್ರೀಬೂದಿಬಸವ ಮಠದಲ್ಲಿ ಇಂದು ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.

ಶ್ರೀಬೂದಿಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು ಶ್ರೀಗುರು ಪಟ್ಟಾಧಿಕಾರ ರಜತ ಮಹೋತ್ಸವ ನಿಮಿತ್ತವಾಗಿ ಸರ್ವ-ಧರ್ಮದವರಿಗೆ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಶ್ರೀಮಠದ ಪೀಠಾಧಿಪತಿ ಶ್ರೀಬೂದಿಬಸವ‌ ಶಿವಾಚಾರ್ಯ‌ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 225 ಜೋಡಿಗಳು ವಿವಾಹವಾದರು. ಹರ-ಗುರು ಚರಮೂರ್ತಿಗಳು, ಸಚಿವರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು, ಗಣ್ಯರು, ಗುರು-ಹಿರಿಯರ ಹಾಗೂ ಸಾರ್ವಜನಿಕ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನೂತನ ವಧು ವರರಿಗೆ ಗಣ್ಯರು ಶುಭ ಹಾರೈಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿ ವಿವಿಧ ರಾಜ್ಯದಿಂದ ಆಗಮಿಸಿದ್ದ ಜೋಡಿಗಳು ಮದುವೆಯಾಗುವ ಮೂಲಕ ಗಮನ ಸೆಳೆದರು. ಮದುವೆಗೆ ಬಂದಂತಹವರಿಗೆ ಶ್ರೀಮಠದಿಂದ ದಾಸೋಹ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಈ ವೇಳೆ ಮಾತನಾಡಿದ ಶ್ರೀಮಠದ ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀಮಂತರು, ಬಡವರು ಎನ್ನದೇ ಸಾಮೂಹಿಕ ವಿವಾಹದಲ್ಲಿ ಮದುವೆಯಾದಾಗ ಜೀವನ ಸಾರ್ಥಕ ಆಗುತ್ತದೆ. ಜೀವ, ಜೀವನ ಯಾವುದೂ ಶಾಶ್ವತವಲ್ಲ. ಈ ಪ್ರಪಂಚದಲ್ಲಿ ಸಾಮೂಹಿಕ ಇರುವುದು ಎರಡರಲ್ಲಿ, ಒಂದು ಹುಟ್ಟು, ಇನ್ನೊಂದು ಸಾವು. ಮದುವೆಯೆಂಬುದು ಸಹ ಸಾಮೂಹಿಕ ವಿವಾಹದಲ್ಲಿ ಆಗಬೇಕು ಎಂದರು.

ಕೇವಲ ಬಡತನ ರೇಖೆಗಿಂತ ಕೆಳಗಿರುವವರು ಮಾತ್ರವಲ್ಲದೆ ಸ್ಥಿತಿವಂತರು ಶ್ರೀಮಂತರೂ ಕೂಡ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಬೇಕು. ಅಲ್ಲದೇ ಎಲ್ಲಾರೂ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು, ಪ್ರಸಕ್ತ ವರ್ಷದಲ್ಲಿ ಯಾವುದೇ ಜಾತಿ-ಮತ-ಭೇದವಿಲ್ಲದೆ 225 ನವಜೋಡಿಗಳು ಮದುವೆಯಾಗಿದ್ದಾರೆ. ನಮ್ಮ ಜಿಲ್ಲೆ ಹಾಗೂ ರಾಜ್ಯದ ನಾನ ಭಾಗಗಳಿಂದ ಜೊತೆಗೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಜೋಡಿಗಳು ಇಲ್ಲಿಗೆ ಬಂದು ವಿವಾಹವಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲು ಶ್ರೀಮಠ ಆದ್ಯತೆ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಚಿವ ಎನ್.ಎಸ್. ಬೋಸರಾಜು, ‌ಮಹರ್ಷಿ ವಾಲ್ಮೀಕಿ ‌ನಿಗಮ ಮಂಡಳಿ ಅಧ್ಯಕ್ಷ ಬಸವನಗೌಡ ದದ್ದಲ್, ಶಾಸಕಿ ಕರೆಮ್ಮ ನಾಯಕ, ಮುಖಂಡ ಶರಣಗೌಡ ಪಾಟೀಲ್ ಲಕ್ಕಂದಿನ್ನಿ, ಶ್ರೀಮಠದ ಭಕ್ತರು, ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದನ್ನೂ ಓದಿ:50 ನೂತನ ಬಸ್​ಗಳ ಲೋಕಾರ್ಪಣೆ; ಅಪಘಾತ ರಹಿತ 38 ಚಾಲಕರಿಗೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನ

Last Updated : Feb 18, 2024, 10:39 PM IST

ABOUT THE AUTHOR

...view details