ಕರ್ನಾಟಕ

karnataka

ETV Bharat / state

ದಿಢೀರ್​ ಬಿಪಿಎಲ್​ ರೇಷನ್ ಕಾರ್ಡ್ ರದ್ದು; ಹುಬ್ಬಳ್ಳಿಯಲ್ಲಿ ಪಡಿತರ ಚೀಟಿ ಹೋಗಿದ್ದಕ್ಕೆ ಜನರಿಗೆ ಸಂಕಷ್ಟ

ಕೆಲವರ ಬಿಪಿಎಲ್​ ರೇಷನ್ ಕಾರ್ಡ್​ಗಳು ರದ್ದಾಗುತ್ತಿರುವ ಸುದ್ದಿ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ಪಡಿತರ ರದ್ದಾದ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಇಂದು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

BPL CARD CANCEL
ಪಡಿತರ ರದ್ದಾದವರ ಗೋಳು (ETV Bharat)

By ETV Bharat Karnataka Team

Published : Nov 21, 2024, 3:41 PM IST

ಹುಬ್ಬಳ್ಳಿ: ರಾಜ್ಯ ಸರ್ಕಾರ ಅನರ್ಹ ಪಡಿತರ ಚೀಟಿ ರದ್ದುಗೊಳಿಸಲು ಮುಂದಾಗಿದ್ದು, ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಮುಂದಾಗಿದೆ. 6 ತಿಂಗಳಿಂದ ರೇಷನ್‌ ಪಡೆಯದವರು, ಆದಾಯ ತೆರಿಗೆದಾರರು ಸೇರಿದಂತೆ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ಕಾರ್ಡ್‌ಗಳ ರದ್ದತಿ ಅಥವಾ ಬದಲಾವಣೆಗೆ ಇಲಾಖೆ ಕಾರ್ಯೋನ್ಮುಖವಾಗಿದೆ.

ಆದ್ರೆ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳು ರದ್ದಾಗಿದ್ದು, ಇದರಿಂದ ಆತಂಕಗೊಂಡ ಹಾಗೂ ಅನರ್ಹಗೊಂಡವರು ಆಹಾರ ಇಲಾಖೆಗೆ ಆಗಮಿಸಿ ಅಳಲು ತೋಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಹುಬ್ಬಳ್ಳಿಯ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಗೆ ಆಗಮಿಸುತ್ತಿರುವ ಫಲಾನುಭವಿಗಳು, ನಾವು ಯಾವುದೇ ಆದಾಯ ತೆರಿಗೆ ಕಟ್ಟಿಲ್ಲ, ಕಳೆದ ಹಲವು ವರ್ಷಗಳಿಂದ ರೇಷನ್ ಕಾರ್ಡ್​ನಿಂದಲೇ ಜೀವನ ನಿರ್ವಹಣೆ ಮಾಡಲಾಗುತ್ತಿದ್ದು, ಇದೀಗ ಅದೇ ರೇಷನ್​ ಕಾರ್ಡ್​​ಗಳು ರದ್ದಾಗಿವೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಪಡಿತರ ರದ್ದಾದವರ ಗೋಳು (ETV Bharat)

ಈ ಕುರಿತು ಈಟಿವಿ ಭಾರತ ಕನ್ನಡದೊಂದಿಗೆ ತಮ್ಮ ಸಂಕಷ್ಟ ತೋಡಿಕೊಂಡ ಸವಿತಾ ಎಂಬುವರು, ಕಳೆದ 20 ವರ್ಷಗಳಿಂದ ಪಡಿತರ ಅಕ್ಕಿ ಮೇಲೆ ಜೀವನ ನಡೆಸಿದ್ದೇವೆ, ಈಗ ಏಕಾಏಕಿ ಪಡಿತರ ಚೀಟಿ ರದ್ದಾಗಿದೆ ಎನ್ನುತ್ತಿದ್ದಾರೆ‌. ನಾವು ಒಂದು ಪೈಸಾ ತೆರಿಗೆ ಕಟ್ಟಿಲ್ಲ, ಆದ್ರೂ ನಮ್ಮ ಕಾರ್ಡ್ ರದ್ದಾಗಿದೆ. ನಮಗೆ ವಯಸ್ಸಾಗಿದೆ, ಗಂಡ-ಹೆಂಡತಿ ಮಾತ್ರ ಇದ್ದೇವೆ. ಹೀಗಾದರೆ ಜೀವನ ನಿರ್ವಹಣೆ ಹೇಗೆ ಎಂದು ಕಣ್ಣೀರು ಹಾಕಿದರು.

ಸಂತೋಷ್​ ಎಂಬುವರು ಮಾತನಾಡಿ, ನಾನೊಬ್ಬ ಬಡ ಕಾರ್ಮಿಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ರೇಷನ್ ಕಾರ್ಡ್ ಮಾಡಿಸಿಕೊಂಡು ಪ್ರತಿ ತಿಂಗಳು ಏಳು ಸಾವಿರ ಸಂಬಳ‌ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿರುವೆ. ಆದ್ರೆ ಬ್ಯಾಂಕ್ ಖಾತೆ ತೆರೆಯಲು ಪಾನ್ ಕಾರ್ಡ್ ಮಾಡಿಕೊಂಡಿದ್ದೆ. ಈಗ ತೆರಿಗೆ ಕಟ್ಟುತ್ತಿದ್ದೇನೆ ಎಂದು ಕಾರ್ಡ್ ರದ್ದುಗೊಳಿಸಲಾಗಿದೆ. ಕಳೆದ ಎರಡು ತಿಂಗಳಿಂದ ಪಡಿತರ ಬಂದಿಲ್ಲ‌. ಅಲ್ಪ ಸಂಬಳದಲ್ಲಿ ಹೆಂಡತಿ, ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ? ಯಾವುದೇ ಸಾಲವಿಲ್ಲ. ಮನೆ ಕಟ್ಟುವ ಸಲುವಾಗಿ ವೈಯಕ್ತಿಕ ಸಾಲ ಪಡೆದುಕೊಂಡಿದ್ದೇನೆ. ಸರ್ಕಾರದಿಂದ ಯಾವುದೇ ಸಹಾಯಧನ ಪಡೆದುಕೊಂಡಿಲ್ಲ. ಎರಡು ತಿಂಗಳಿಂದ ಪಡಿತರವಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದು, ಮೊದಲಿನಂತೆ ಪಡಿತರ ನೀಡಬೇಕೆಂದು ಒತ್ತಾಯಿಸಿದರು.

ಅನರ್ಹರು ಯಾರು?

  • ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚಿರುವವರು
  • ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು
  • ಆದಾಯ ತೆರಿಗೆ ಪಾವತಿಸುವವರು
  • ಹಳ್ಳಿಯಲ್ಲಿ 3 ಹೆಕ್ಟೇರ್‌ ಒಣಭೂಮಿ, ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು
  • ನಗರ ಪ್ರದೇಶಗಳಲ್ಲಿ 1000 ಚದರ್​ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು
  • ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿರುವವರು

ಈ ಕುರಿತಂತೆ ಆಹಾರ ಮತ್ತು ಸರಬರಾಜು ಸಹಾಯ ನಿರ್ದೇಶಕಿ ವಸುಂಧರಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಹುಬ್ಬಳ್ಳಿ ನಗರ ವ್ತಾಪ್ತಿಯಲ್ಲಿ 1 ಲಕ್ಷ 14 ಸಾವಿರ ಬಿಪಿಎಲ್​ ಕಾರ್ಡ್​ಗಳಿವೆ. ಅದರಲ್ಲಿ 1894 ಜನ ತೆರಿಗೆ (Tax Payers) ಕಟ್ಟುವರಿದ್ದಾರೆಂದು ಮುಖ್ಯ ಕಚೇರಿಯಿಂದ ತಿಳುದು ಬಂದಿದೆ. ಅದರಲ್ಲಿ 600 ಜನರ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ. 1294 ಜನರ ಕಾರ್ಡ್​ಗಳನ್ನು ಎಪಿಎಲ್ ಕಾರ್ಡ್​ಗಳಾಗಿ ಪರಿವರ್ತಿಸಲಾಗಿದೆ. ಇನ್ನು 14 ಜನ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವುಗಳನ್ನು ರದ್ದು ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಅವರು ತೆರಿಗೆ ಕಟ್ಟುತ್ತಿರುವುದು. ಈ ಮೂಲಕ ತಮ್ಮ ಆದಾಯವನ್ನು ತಾವೇ ಘೋಷಣೆ ಮಾಡಿಕೊಂಡಿರುತ್ತಾರೆ. ಕೆಲವರು ಬಂದು ಸೂಕ್ತ ದಾಖಲೆ ನೀಡಿದ್ದಾರೆ. ಇನ್ನೂ ಕೆಲವರು ಬಂದಿಲ್ಲ. 600 ಕಾರ್ಡ್ ರದ್ದು ಮಾಡಲಾಗಿದ್ದು, ಅವರು ಸೂಕ್ತ ದಾಖಲೆ ನೀಡಿದ್ರೆ, ಪರಿಶೀಲನೆ ನೀಡಿದ್ರೆ ಅವರನ್ನು ಬಿಪಿಎಲ್ ಆಗಿ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್​ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ

ಕಾರ್ಡ್ ಪರಿಷ್ಕರಣೆ ನಿಲ್ಲಿಸಿದ ಸರ್ಕಾರ:ಈ ನಡುವೆ, ರಾಜ್ಯದಲ್ಲಿ ಬಿಪಿಎಲ್​​ ಕಾರ್ಡ್​ಗಳ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೆ.ಹೆಚ್. ಮುನಿಯಪ್ಪ, ''ಸದ್ಯಕ್ಕೆ ಕಾರ್ಡ್‌ಗಳ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ, ಉಳಿದೆಲ್ಲ ಕಾರ್ಡ್‌ಗಳೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲ ಕಾರ್ಡ್‌ಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸುತ್ತೇವೆ'' ಎಂದು ಸ್ಪಷ್ಟಪಡಿಸಿದ್ದಾರೆ.

''ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಒಂದು ವಾರದೊಳಗಾಗಿ ನೀಡಿ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು'' ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಬಿಪಿಎಲ್​​ ಕಾರ್ಡ್​ಗಳ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ

ABOUT THE AUTHOR

...view details