ಕರ್ನಾಟಕ

karnataka

'ಮಂತ್ರಾಲಯ ಪರಿಮಳ ಪ್ರಸಾದಕ್ಕೆ ಬಳಸುವ ತುಪ್ಪದ ಲ್ಯಾಬ್ ರಿಪೋರ್ಟ್ ಪಡೆದಿದ್ದೇವೆ' - Shri Subudhendra Teertha Swamiji

By ETV Bharat Karnataka Team

Published : 4 hours ago

ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ಆರೋಪದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂತ್ರಾಲಯ ಶ್ರೀಗಳು ಆಗ್ರಹಿಸಿದರು.

ಮಂತ್ರಾಲಯ ಶ್ರಿ
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು (ETV Bharat)

ರಾಯಚೂರು:"ತಿರುಪತಿ ತಿರುಮಲ ದೇವಾಲಯ ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರ. ದೇಗುಲದಿಂದ ನೀಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬುದರ ಬಗ್ಗೆ ಸರ್ಕಾರ ಸಮಗ್ರ ತನಿಖೆ ಕೈಗೊಳ್ಳಬೇಕು" ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆಗ್ರಹಿಸಿದ್ದಾರೆ.

ಭಾನುವಾರ ರಾಯಚೂರು ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಿರುಪತಿ ಲಡ್ಡು ಪ್ರಸಾದ ಬಗ್ಗೆ ಈಗಾಗಲೇ ತನಿಖೆಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ಮೋದಿ ಅವರು ಮಾತನಾಡಿದ್ದಾರೆ. ಈ ತಪ್ಪು ಯಾರೇ ಮಾಡಿದರೂ ಖಂಡನೀಯ. ಭಕ್ತರ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ನಡೆದಿರುವುದು ಅತ್ಯಂತ ಹೇಯ ಮತ್ತು ಅಪಚಾರ. ತಪ್ಪಿತಸ್ಥರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದರು.

ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರಿಗಳು (ETV Bharat)

ತಿರುಪತಿ ದೇವಸ್ಥಾನ ‌ಶುದ್ಧೀಕರಣ ಕುರಿತು ಪ್ರತಿಕ್ರಿಯಿಸಿ, "ತಿರುಪತಿಯಲ್ಲಿ ಆಗಮಯುಕ್ತವಾಗಿ ಎಲ್ಲ ಶುದ್ಧೀಕರಣ ಕ್ರಮಗಳು ಆಗಬೇಕು. ಇದರಲ್ಲಿ ನಾವೂ ಕೂಡ ಭಾಗಿಯಾಗುತ್ತೇವೆ" ಎಂದು ತಿಳಿಸಿದರು.

"ರಾಯರ ಆರಾಧನೆಗೆ ಟಿಟಿಡಿಯಿಂದ ಶೇಷವಸ್ತ್ರ ಬರುವುದು ಸಾಮಾನ್ಯ. ಶೇಷವಸ್ತ್ರ ಬರುವಾಗ ಪ್ರಸಾದ, ಮಂತ್ರಾಕ್ಷತೆ, ಶ್ರೀಪಾದರಿಗಾಗಿ ಪಂಚೆ ಕರ್ಪೂರ ಪ್ರಸಾದವಾಗಿ ಬರುವುದು ನಿಜ. ಇದೆಲ್ಲವೂ ಸಾರ್ವಜನಿಕ ವಿತರಣೆಗಾಗಿ ಅಲ್ಲ. ತಿರುಪತಿಯಿಂದ ಬಂದ ಪ್ರಸಾದವನ್ನು ‌ನಾವು ಗೌರವದಿಂದ ಸ್ವಾಗತಿಸಿದ್ದೇವೆ. ದೇವಸ್ಥಾನಗಳಿಂದ ಬಂದಿರುವ ಪ್ರಸಾದದಲ್ಲಿ ಏನಿದೆ ಅಂತಾ ನೋಡಿ ಭಕ್ತರು ತೆಗೆದುಕೊಳ್ಳಲು ಆಗಲ್ಲ. ಕೊಡುವವರು, ತರುವವರು ಪ್ರಸಾದಕ್ಕೆ ಬೇಕಾದ ಪದಾರ್ಥಗಳನ್ನು ಖರೀದಿಸುವರು, ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ದೇವಸ್ಥಾನದ ಕ್ರಮಗಳು ಬೇರೆ, ಮಠ-ಮಾನ್ಯಗಳ ಕ್ರಮಗಳೇ ಬೇರೆ. ನಾವು ರಾಯರಿಗೆ ಶೇಷವಸ್ತ್ರವನ್ನೇ ಪ್ರಸಾದವೆಂದು ಸಮರ್ಪಣೆ ‌ಮಾಡುತ್ತೇವೆ" ಎಂದು ಹೇಳಿದರು.

"ಮಂತ್ರಾಲಯದ ಪರಿಮಳ ಪ್ರಸಾದಕ್ಕೆ ವಿಜಯ ಡೈರಿಯಿಂದ ನಾವು ತುಪ್ಪ ತರಿಸುತ್ತೇವೆ. ಕೊರೊನಾಗಿಂತ ಮುಂಚೆ ನಾವು ಪರಿಮಳ ‌ಪ್ರಸಾದಕ್ಕೆ ನಂದಿನಿ ತುಪ್ಪ ‌ಬಳಕೆ ಮಾಡುತ್ತಿದ್ದೆವು. ಎರಡು ರಾಜ್ಯ ದಾಟಿ ಬರಲು ತೊಂದರೆ ಆಗಿತ್ತು.‌ ಆ ಬಳಿಕ ಕರ್ನೂಲ್​​ನ ವಿಜಯ ಡೈರಿಯಿಂದ ತುಪ್ಪ ತರಿಸಿಕೊಳ್ಳುತ್ತಿದ್ದೇವೆ. ತಿರುಪತಿ ಲಡ್ಡು ವಿಚಾರ ಬಂದ ಬಳಿಕ ನಾವು ಪರಿಶೀಲನೆ ಮಾಡಿದ್ದೇವೆ. ನಮಗೆ ಸರಬರಾಜಾಗುವ ತುಪ್ಪದ ಲ್ಯಾಬ್ ರಿಪೋರ್ಟ್ ಕೇಳಿ ಪಡೆದಿದ್ದೇವೆ‌. ಎಫ್​ಸಿಐ ನಿಯಮ ಪಾಲನೆ ಮಾಡಿದ ಆಹಾರ ಪದಾರ್ಥಗಳನ್ನೇ ಬಳಸುತ್ತೇವೆ. ಪರಿಮಳ ಪ್ರಸಾದದಲ್ಲಿ ಬಳಸುವ ತುಪ್ಪ ಶುದ್ಧವಾಗಿದೆ" ಎಂದು ಸ್ಪಷ್ಟಪಡಿಸಿದರು.

"ಸ್ವತಂತ್ರ ಪೂರ್ವದಲ್ಲಿ ಊರಿನ ಮುಖಂಡರು ಹಾಗೂ ಅರ್ಚಕರ ನೇತೃತ್ವದಲ್ಲಿ ದೇವಸ್ಥಾನಗಳು ನಡೆಯುತ್ತಿದ್ದವು. ಈಗ ಕಾನೂನುಗಳಿಂದ ಎಲ್ಲವೂ ಸರ್ಕಾರದ ವಶಕ್ಕೆ ಹೋಗಿವೆ. ರಾಜಕೀಯ ಹಿನ್ನೆಲೆಯಲ್ಲಿ ಇಂತಹ ತೊಂದರೆಗಳಾಗುತ್ತಿವೆ. ಆಯಾ ಊರಿನ ದೇವಸ್ಥಾನ, ಮಠಗಳಲ್ಲಿ ಆಯಾ ಪ್ರಾಂತದವರ ನೇತೃತ್ವ ಇರಬೇಕು. ನಮ್ಮ ಊರಿನ ದೇವಸ್ಥಾನದ ಬಗ್ಗೆ ಯಾರೋ ಬಂದು ಹೇಳುವುದು ಅಲ್ಲ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ಅರ್ಚಕರು, ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವಸ್ಥಾನ ‌ನಡೆಯಬೇಕು. ಕೇಂದ್ರ ಸರ್ಕಾರ ಮಠ-ಮಾನ್ಯಗಳಿಗೆ ಒಂದು ವಿಶೇಷ ಕಾಯ್ದೆ ತರಲಿ" ಎಂದು ಒತ್ತಾಯಿಸಿದರು.

ABOUT THE AUTHOR

...view details