ಮಂಗಳೂರು:ಹಳೆಯ ನಾಣ್ಯಗಳ ಖರೀದಿ ನೆಪದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 58 ಲಕ್ಷ ರೂ. ವಂಚಿಸಿದ ಘಟನೆ ನಡೆದಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ:ಮಂಗಳೂರಿನ ವ್ಯಕ್ತಿ 2024ರ ನವೆಂಬರ್ 25ರಂದು ಫೇಸ್ಬುಕ್ ನೋಡುತ್ತಿರುವಾಗ ಹಳೆಯ ನ್ಯಾಣ್ಯಗಳನ್ನು ಖರೀದಿಸಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿರುವ ಜಾಹಿರಾತನ್ನು ನೋಡಿದ್ದಾರೆ. ಬಳಿಕ ಆ ಜಾಹಿರಾತಿನಲ್ಲಿದ್ದ ವಾಟ್ಸ್ಆ್ಯಪ್ ಖಾತೆಗೆ ತಮ್ಮ ಬಳಿ ಇದ್ದ 15 ಹಳೆಯ ನ್ಯಾಣ್ಯಗಳ ಫೋಟೋಗಳನ್ನು ಕಳುಹಿಸಿದ್ದರು. ಅದರಂತೆ, ಆ ಕಡೆಯಿಂದ 15 ಹಳೆಯ ನ್ಯಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49,00,000 ರೂ. ಹಣ ನೀಡುವುದಾಗಿ ಆರೋಪಿ ತಿಳಿಸಿದ್ದ ಎಂದು ವಂಚನೆಗೊಳಗಾದವರು ದೂರಿನಲ್ಲಿ ತಿಳಿಸಿದ್ದಾರೆ.
ಬೇರೆ ಬೇರೆ ಶುಲ್ಕ ವಸೂಲಿ: ಬಳಿಕ, ನಾಣ್ಯ ಮಾರಲು ಇಷ್ಟವಿದ್ದರೆ ಮೊದಲಿಗೆ ಆರ್ಬಿಐ ನೋಂದಣಿ ಮಾಡಲು 750 ರೂ. ಹಣ ಪಾವತಿಸುವಂತೆ ಆರೋಪಿ ತಿಳಿಸಿದ್ದು, ವ್ಯಕ್ತಿಯು ಯುಪಿಐ ಮೂಲಕ ಪಾವತಿಸಿದ್ದರು. ಆ ಬಳಿಕ ಜಿಎಸ್ಟಿ ಪ್ರೊಸಿಡಿಂಗ್ ಡಾಟಾ ಶುಲ್ಕವೆಂದು 17,500 ರೂ., ಇನ್ಶೂರೆನ್ಸ್ ಶುಲ್ಕ 94,500 ರೂ., ಟಿಡಿಎಸ್ ಮೊತ್ತದ ಶುಲ್ಕ 49,499 ರೂ., ಜಿಪಿಎಸ್ ಶುಲ್ಕ 71,500 ರೂ., ಐಟಿಆರ್ ಶುಲ್ಕ 39,990 ರೂ. ಹಾಗೂ ಆರ್ಬಿಐ ನೋಟಿಸ್ ಪೆಂಡಿಂಗ್ ಶುಲ್ಕವೆಂದು 3,50,000 ರೂ. ಹಣ ಪಾವತಿಸುವಂತೆ ಆರೋಪಿಯು ವಾಟ್ಸ್ಆ್ಯಪ್ ನಂಬರ್ಗೆ ಸಂದೇಶ ಕಳಿಸಿದ್ದಾನೆ. ಆತ ತಿಳಿಸಿದಂತೆ ತಾವು ಹಣವನ್ನು ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ, 2024ರ ಡಿಸೆಂಬರ್ 15ರಂದು ತಮ್ಮ ಮೊಬೈಲ್ ನಂಬರ್ಗೆ ಕರೆಯೊಂದು ಬಂದಿದ್ದು, ಆ ಕಡೆಯಿಂದ ವ್ಯಕ್ತಿ ತನ್ನನ್ನು ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂದೆ ಎಂಬುದಾಗಿ ಪರಿಚಯಿಸಿಕೊಂಡ. ಅಲ್ಲದೆ, ಆರ್ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಆದ್ದರಿಂದ ಆರ್ಬಿಐ ಗೈಡ್ಲೈನ್ಸ್ ಪ್ರಕಾರ 12,55,000 ರೂ. ಹಣ ಪಾವತಿಸಬೇಕು. ಬಳಿಕ ನಾವು ಚೆಕ್ ಮಾಡಿ, 1 ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ನಿಮಗೆ ವರ್ಗಾಯಿಸುತ್ತೇವೆ ಎಂದು ನಂಬಿಸಿದ್ದಾನೆ.
ಅದರಂತೆ, ಅಪರಿಚಿತ ಕರೆಯ ವ್ಯಕ್ತಿಯು ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಂಶಯಪಟ್ಟು ಅವರನ್ನು ಪ್ರಶ್ನಿಸಿದಕ್ಕೆ ಅಪರಿಚಿತನು ಏಕಾಏಕಿ ಗದರಿಸಲು ಶುರು ಮಾಡಿದ್ದಾನೆ. ಇದೇ ರೀತಿ 2024ರ ನವೆಂಬರ್ 25ರಿಂದ ಡಿ.30 ವರೆಗೆ ಅಪರಿಚಿತರು ಫೋನ್ ಕರೆ ಮಾಡಿ ಹಾಗೂ ವಾಟ್ಸ್ಆ್ಯಪ್ ಖಾತೆಗೆ ಸಂದೇಶ ಕಳಿಸಿ, ಜಿಎಸ್ಟಿ ಪ್ರೊಸೀಡಿಂಗ್ ಡಾಟಾ, ಶುಲ್ಕ, ಇನ್ಶೂರೆನ್ಸ್ ಶುಲ್ಕ, ಟಿಡಿಎಸ್ ಮೊತ್ತದ ಶುಲ್ಕ, ಜಿಪಿಎಸ್ ಶುಲ್ಕ, ಐಟಿಆರ್ ಶುಲ್ಕ ಹಾಗೂ ಆರ್ಬಿಐ ನೋಟಿಸ್ ಪೆಂಡಿಂಗ್ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿ, ಹಂತ-ಹಂತವಾಗಿ ಒಟ್ಟು 58,26,399 ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ತಮಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಎಚ್ಚರ..ಇದು ಹೊಸ ವಂಚನೆ ಮಾರ್ಗ: ನಿಮ್ಮ ಖಾತೆಗೆ 5 ಸಾವಿರ ಉಚಿತ ಠೇವಣಿ; ಕ್ಲಿಕ್ ಮಾಡಿದರೆ ಅಕೌಂಟ್ ಖಾಲಿ ಖಾಲಿ
ಇದನ್ನೂ ಓದಿ:ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಪೆಟ್ರೋಲ್ ಬಂಕ್ಗೆ ₹ 58 ಲಕ್ಷ ವಂಚಿಸಿದ ಸಿಬ್ಬಂದಿ