ಕರ್ನಾಟಕ

karnataka

ETV Bharat / state

ಸದನದಲ್ಲಿ ಪ್ರತಿಧ್ವನಿಸಿದ ಮಂಗಳೂರು ಶಾಲೆ ಘಟನೆ ; ಆಡಳಿತ ಪ್ರತಿಪಕ್ಷದ ನಡುವೆ ತೀವ್ರ ವಾಕ್ಸಮರ - ಗೃಹ ಸಚಿವ ಜಿ ಪರಮೇಶ್ವರ್

ಮಂಗಳೂರು ಶಾಲೆ ಘಟನೆ ಸದನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಗೃಹ ಸಚಿವ ಜಿ ಪರಮೇಶ್ವರ್
ಗೃಹ ಸಚಿವ ಜಿ ಪರಮೇಶ್ವರ್

By ETV Bharat Karnataka Team

Published : Feb 15, 2024, 7:18 PM IST

Updated : Feb 15, 2024, 7:52 PM IST

ಸದನದಲ್ಲಿ ಪ್ರತಿಧ್ವನಿಸಿದ ಮಂಗಳೂರು ಶಾಲೆ ಘಟನೆ

ಬೆಂಗಳೂರು :ಮಂಗಳೂರು ಶಾಲೆ ಘಟನೆ, ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು ಪ್ರಕರಣ ಸದನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.

ಮಂಗಳೂರು ಶಾಲೆ ಘಟನೆ ಸಂಬಂಧ ಶೂನ್ಯವೇಳೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, ನಿನ್ನೆ ಮಂಗಳೂರು ದಕ್ಷಿಣ ಠಾಣೆಗೆ ಶಾಲೆಯಿಂದ ದೂರು ದಾಖಲಾಗಿದೆ. ಶಿಕ್ಷಕಿ ಪ್ರಭಾ ಅವರು ಹಿಂದೂ ದೇವರುಗಳ ಅಪಮಾನ ಮಾಡಿರುವರೆಂದು ಆರೋಪಿಸಿ ಆಡಿಯೋ ವೈರಲ್ ಆಗಿರುತ್ತದೆ. ಆದರೆ ಸಿಸ್ಟರ್ ಪ್ರಭಾ ಅವರು ಯಾವುದೇ ಧರ್ಮಕ್ಕೆ ಅವಮಾನಕರವಾಗಿ ನಡೆದುಕೊಂಡಿರುವುದಿಲ್ಲ. ಆದರೆ ಇದನ್ನು ಶಾಲಾ ಆಡಳಿತ ಮಂಡಳಿ ಜತೆ ವೇದವ್ಯಾಸ್ ಕಾಮತ್ ವಿಚಾರ ವಿಮರ್ಶೆ ಮಾಡದೇ ಫೆ. 12 ರಂದು ಭರತ್ ಶೆಟ್ಟಿ, ಶರಣ್ ಪಂಪ್ ವೆಲ್, ಸಂದೀಪ್, ಭರತ್ ಕುಮಾರ್ ಇವರುಗಳು ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿರುತ್ತಾರೆ. ಶಾಲೆ ಎದುರು ಅಕ್ರಮವಾಗಿ ಸೇರಿ ಜೈಶ್ರೀರಾಂ ಘೋಷಣೆ ಕೂಗಿ, ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತಾಡಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ವಿದ್ಯಾರ್ಥಿಗಳು ಶಾಲಾ ನಿಯಮಗಳನ್ನು ಉಲ್ಲಂಘಿಸುವಂತೆ ಪ್ರಚೋದನೆ ಮಾಡಿರುತ್ತಾರೆ. ಜತೆಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಮಾತಾಡಿ ಬೆದರಿಕೆ ಹಾಕಿರುತ್ತಾರೆ. ಹಾಗೆಯೇ ಹಿಂದೂ ಕ್ರೈಸ್ತ ಧರ್ಮೀಯರ ನಡುವೆ ಕದನ, ಕಲಹ ಆಗುವಂತೆ ಪ್ರಚೋದಿಸಿರುತ್ತಾರೆ. ಇದರ ಬಗ್ಗೆ ಮೊಕದ್ದಮೆ ದಾಖಲಾಗಿರುತ್ತದೆ ಎಂದು ಸದನದಲ್ಲಿ ಎಫ್‌ಐಆರ್ ಕಾಪಿ ಓದಿದರು.

ಭರತ್ ಶೆಟ್ಟಿ ಶಾಲೆ ಬಳಿ ಹೋಗಿಲ್ಲ ಅನ್ನೋದು ನಿಜ:ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ. ನಾನು ಇದರ ಬಗ್ಗೆ ಪರಿಶೀಲಿಸಿಕೊಂಡಿದ್ದೇನೆ. ಶಾಲೆ ಎದುರು ಇರಲಿಲ್ಲ. ಡಿಡಿಪಿಐ ಕಚೇರಿಗೆ ಹೋಗಿ ಅವರು ಸ್ಟೇಟ್‌ಮೆಂಟ್ ಮಾಡಿದ್ದಾರೆ. ಭರತ್ ಶೆಟ್ಟಿ ಶಾಲೆ ಬಳಿ ಹೋಗಿಲ್ಲ. ಪ್ರಕರಣದ ತನಿಖೆ ಮಾಡ್ತೇವೆ. ಭರತ್ ಶೆಟ್ಟಿ ಅವರು ಡಿಡಿಪಿಐ ಕಚೇರಿ ಬಳಿ ಹೋಗಿ ಹಿಂದೂ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗೆ ಸೇರಿಸಬೇಡಿ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆ ಅಂತ ದೂರಿನಲ್ಲಿ ಸೇರಿಸಿದ್ದಾರೆ. ಆದರೆ ಭರತ್ ಶೆಟ್ಟಿ ಶಾಲೆ ಬಳಿ ಹೋಗಿಲ್ಲ ಅನ್ನೋದು ನಿಜ ಎಂದರು.

ಸದನದಲ್ಲಿ ಪ್ರತಿಧ್ವನಿಸಿದ ಮಂಗಳೂರು ಶಾಲೆ ಘಟನೆ

ದೂರಿನಲ್ಲಿ ಶಾಲೆ ಬಳಿ ಹೋಗಿ ಭರತ್ ಶೆಟ್ಟಿ ಮಾತಾಡಿದ್ದಾರೆ ಅಂತ ಇದೆ. ಪರಮೇಶ್ವರ್ ಅವರೇ ಹೇಳಿದ್ದಾರೆ ಅವರು ಅಲ್ಲಿರಲಿಲ್ಲ ಅಂತ. ಆದ್ರೆ ಕೇಸ್​ನಲ್ಲಿ ಭರತ್ ಶೆಟ್ಟಿ ಶಾಲೆ ಬಳಿ ಇದ್ರು ಅಂತ ದಾಖಲಾಗಿದೆ. ಆದ್ರೆ ಎಫ್‌ಐಆರ್​ನಲ್ಲಿ ಸಿಸ್ಟರ್ ಪ್ರಭಾ ಯಾವುದೇ ಧರ್ಮಕ್ಕೆ ಅವಮಾನ ಆಗುವಂತೆ ನಡೆದುಕೊಂಡಿಲ್ಲ ಅಂತ ಇದೆ. ಇದಕ್ಕೆ ನೀವು ಹೇಗೆ ಸರ್ಟಿಫಿಕೇಟ್ ಕೊಡ್ತೀರಿ? ಎಂದು ಪರಮೇಶ್ವರ್​ಗೆ ಬೊಮ್ಮಾಯಿ ಪ್ರಶ್ನಿಸಿದರು.

ಟೀಚರ್ ಮೇಲೆ ಎಫ್ಐಆರ್ ಇಲ್ಲ : ಮಧ್ಯಪ್ರವೇಶಿಸಿದ ಶಾಸಕ ಭರತ್ ಶೆಟ್ಟಿ, ಹಾಗಾದರೆ ಟೀಚರ್ ಅಮಾನತು ಮಾಡಿದ್ದು ಏಕೆ?. ಮಕ್ಕಳ ಪೋಷಕರು ದೂರು ನೀಡಿದ್ದಾರೆ. ತನಿಖೆ ಮಾಡುವ ಡಿಡಿಪಿಐ ಅವರನ್ನು ಟ್ರಾನ್ಸ್​ಫರ್ ಮಾಡಿದ್ದು ಏಕೆ?. ಶರಣ್ ಪಂಪವೆಲ್, ನಾನು ಶಾಲೆಗೆ ಹೋಗಿಲ್ಲ. ಟೀಚರ್ ಮೇಲೆ ಎಫ್ಐಆರ್ ಇಲ್ಲ. ಹಾಗಾದರೆ ನನ್ನ‌ ಮೇಲೆ ಏಕೆ ಕೇಸ್ ಹಾಕಿದ್ರಿ?. ಏನು ಉದ್ದೇಶ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಡಿಡಿಪಿಐ ಈ ವಿಚಾರಕ್ಕೆ ವರ್ಗ ಆಗಿಲ್ಲ. ಅವರು ಬೇರೆ ವಿಚಾರಕ್ಕೆ ವರ್ಗಾವಣೆ ಆದ್ರು. ಮುಂಚೆಯೇ ವರ್ಗಾವಣೆಗೆ ಅವರ ಹೆಸರು ಹೋಗಿತ್ತು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಎರಡು ದೂರು ಬಂದಿವೆ. ಅನಿಲ್ ಜೊರೋಲ್ಡ್ ಲೋಬೋ ಒಂದು ದೂರು ಕೊಟ್ಟಿದ್ದಾರೆ. ಇನ್ನೊಂದು ದೂರನ್ನು ಪೋಷಕರು ಕೊಟ್ಟಿದ್ದಾರೆ. ಎರಡು ದೂರು ಬಂದಾಗ ಎರಡರ ಬಗ್ಗೆಯೂ ನ್ಯಾಯಯುತವಾಗಿ ತನಿಖೆ ಮಾಡಬೇಕು. ಮೊದಲು ಬಂದಿರೋದು ಪೋಷಕರ ದೂರು. ನಾನೇ ಮಾಧ್ಯಮಗಳಲ್ಲಿ ನೋಡಿದ್ದೀನಿ, ಮಕ್ಕಳೇ ಮಾತಾಡಿದ್ದಾರೆ. ಕುಂಕುಮ ಅಲ್ಲ ಅದು ಕಲರ್ ಪೌಡರ್ ಅಂದಿರೋದು, ಬಳೆಗೆ ಪಾವಿತ್ರ್ಯತೆ ಇಲ್ಲ ಅಂತ ಆ ಟೀಚರ್ ಹೇಳಿದ್ದಾರೆ. ಇದು ಕೋಮುಪ್ರಚೋದನೆ ಅಲ್ವಾ?. ಮೊದಲು ಪೋಷಕರು ದೂರು ಕೊಟ್ಟಾಗ ಶಾಲೆಯವರ ಮೇಲೆ ಎಫ್‌ಐಆರ್ ಹಾಕಬೇಕಿತ್ತು. ನಿಮ್ಮ ಹೇಳಿಕೆಯಲ್ಲೇ ವ್ಯತ್ಯಾಸ ಇದೆ ಎಂದು ಆಕ್ಷೇಪಿಸಿದರು.

ಎಸ್ಐ ಸಸ್ಪೆಂಡ್ ಮಾಡಿ : ಸ್ಥಳದಲ್ಲೇ ಇಲ್ಲದ ಭರತ್ ಶೆಟ್ಟಿ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಎಫ್‌ಐಆರ್ ಹಾಕಿದ ಎಸ್‌ಐನನ್ನು ಸಸ್ಪೆಂಡ್ ಮಾಡಿ.‌ ಶಾಸಕರ ರಕ್ಷಣೆಗೆ ಸರ್ಕಾರ ಬರಬೇಕಿತ್ತು. ಸದನ ನಡೆಯುತ್ತಿರುವಾಗ ಎಫ್‌ಐಆರ್ ಹೇಗೆ ಹಾಕಿದ್ರು ಅಂತ ಸುನೀಲ್ ಕುಮಾರ್, ಆರ್. ಅಶೋಕ್ ಆಕ್ರೋಶ ಹೊರಹಾಕಿದರು.

ಪೊಲೀಸರು ತಾರತಮ್ಯ ಮಾಡಿದ್ದಾರೆ : ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪೊಲೀಸರು ತಮ್ಮ ಕರ್ತವ್ಯದಲ್ಲಿ ತಾರತಮ್ಯ ಮಾಡಿದ್ದಾರೆ. ಪೋಷಕರು ಮೊದಲು ದೂರು ಕೊಟ್ಟಾಗ ಶಾಲೆಯವರ ಮೇಲೆ ಎಫ್‌ಐಆರ್ ಹಾಕಲಿಲ್ಲ. ನಂತರ ಶಾಲೆಯವರ ದೂರು ಬಂದಾಗ ಶಾಸಕರ ಮೇಲೆ ಎಫ್‌ಐಆರ್ ಹಾಕಿದ್ರು. ಒಬ್ಬೊಬ್ಬರಿಗೊಂದು ನ್ಯಾಯನಾ?. ಪೊಲೀಸರು ಹೀಗೆ ನಡೆದುಕೊಂಡರೆ ಕಾನೂನಿನ ಭಯ ಇರುತ್ತಾ?. ಪೋಷಕರು ಕೊಟ್ಟಿರುವ ದೂರಿನ ಮೇಲೂ ಎಫ್‌ಐಆರ್ ಆಗಬೇಕು. ಪೊಲೀಸರು ಹೀಗ್ಯಾಕೆ ಮಾಡಿದ್ರು ಅಂತ ತನಿಖೆ ಆಗಬೇಕು. ಆ ಪೊಲೀಸ್ ಅನ್ನು ಸಸ್ಪೆಂಡ್ ಮಾಡಬೇಕು. ಶಾಲೆಯವರು ಆ ಟೀಚರ್​ನ ಸಸ್ಪೆಂಡ್ ಮಾಡಿದ್ದಾರೆ. ಅವರು ಹಿಂದೂಧರ್ಮಕ್ಕೆ ಅವಮಾನ ಮಾಡಿದ್ರು ಅಂತ ತಾನೇ ಸಸ್ಪೆಂಡ್ ಮಾಡಿದ್ರು. ನೀವ್ಯಾಕೆ ಆ ಟೀಚರ್ ಪರ ನಿಲ್ತೀರಿ? ಎಂದು ಪ್ರಶ್ನಿಸಿದರು.

ಭರತ್ ಶೆಟ್ಟಿ ಎಕ್ಸ್​ಪೋಸ್ಟ್ ಬಗ್ಗೆ ಗದ್ದಲ : ಬಳಿಕ ಗೃಹ ಸಚಿವ ಪರಮೇಶ್ವರ್, ಭರತ್ ಶೆಟ್ಟಿ ಎಕ್ಸ್​ಪೋಸ್ಟ್ ಬಗ್ಗೆ ಸದನದಲ್ಲಿ ಓದಿದಾಗ ಗದ್ದಲ ಜೋರಾಯಿತು. ಕ್ರಿಶ್ಚಿಯನ್ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂಬಂತೆ ಪೋಸ್ಟ್ ಮಾಡಿದ್ದ ಭರತ್ ಶೆಟ್ಟಿ ಬರೆದಿದ್ದ ಪೋಸ್ಟ್​ನ್ನು ಓದಿದರು. ಅದಕ್ಕೆ ಅದರಲ್ಲಿ ಏನು ತಪ್ಪಿದೆ? ಎಂದು ಭರತ್ ಶೆಟ್ಟಿ ಅವರು ಪ್ರಶ್ನಿಸಿದರು.‌ ಈ ವೇಳೆ ಬಿಜೆಪಿ ಸದಸ್ಯರು ಏರು ದನಿಯಲ್ಲಿ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಸದನದಲ್ಲಿ ಮಾತಿನ ಚಕಮಕಿ : ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರಿಂದ ಶೇಮ್ ಶೇಮ್ ಕಾಂಗ್ರೆಸ್, ಡೌನ್ ಡೌನ್ ಅಂತ ಘೋಷಣೆ ಕೂಗಿದರು. ಆಗ ಗೃಹ ಸಚಿವ ಪರಮೇಶ್ವರ್, ನಿಧಾನಕ್ಕೆ ಮಾತಾಡಿ, ಉದ್ವೇಗ ಬೇಡ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಸಚಿವ ಪ್ರಿಯಾಂಕ್​ ಖರ್ಗೆ ಸುನೀಲ್ ಕುಮಾರ್​ ಸೇರಿ ಪರಸ್ಪರ ವಾಕ್ಸಮರ ನಡೆಸಿದರು. ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಇದನ್ನೂ ಓದಿ :ಶಾಲಾ ವಿವಾದ: ಇಬ್ಬರು ಬಿಜೆಪಿ ಶಾಸಕರು ಸೇರಿ ಆರು ಮಂದಿ ಮೇಲೆ ಪ್ರಕರಣ ದಾಖಲು

Last Updated : Feb 15, 2024, 7:52 PM IST

ABOUT THE AUTHOR

...view details