ಬೆಂಗಳೂರು:ಊರಿನಲ್ಲಿದ್ದ ಪತ್ನಿಯ ಕಾಟ ತಾಳಲಾರದೆ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಮಹಾದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸುರೇಂದರ್ ಕುಮಾರ್ (29) ಬಂಧಿತ ಆರೋಪಿ.
ಕಳೆದ ಒಂದೂವರೆ ವರ್ಷದಿಂದ ದೊಡ್ಡನೆಕ್ಕುಂದಿ ಬಳಿ ಇರುವ ಜೊನಾಷ ಪ್ಯಾರಡಿಸೋ ವಿಲ್ಲಾದಲ್ಲಿರುವ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗೆ ಉಳಿದುಕೊಳ್ಳಲು ರೂಮ್ ಸಹ ನೀಡಲಾಗಿತ್ತು. ಬರುತ್ತಿದ್ದ 18 ಸಾವಿರ ರೂಪಾಯಿ ತಿಂಗಳ ಸಂಬಳದಲ್ಲಿ ಬಹುಪಾಲನ್ನ ಸುರೇಂದರ್ ಬಿಹಾರದಲ್ಲಿರುವ ತನ್ನ ಪತ್ನಿಗೆ ಕಳಿಸುತ್ತಿದ್ದ. ಆದರೆ, 'ಬೆಂಗಳೂರಿಗೆ ಹೋದರೂ ನೀನು ಇಷ್ಟೇ ಹಣ ಸಂಪಾದನೆ ಮಾಡೋದ?' ಅಂತಾ ಆತನ ಪತ್ನಿ ನಿತ್ಯ ಫೋನ್‌ನಲ್ಲಿ ಜಗಳವಾಡುತ್ತಿದ್ದಳು. ಅಲ್ಲದೆ, ಜಾಸ್ತಿ ಹಣ ಸಂಪಾದನೆ ಮಾಡು ಎಂದು ಕಾಟ ಕೊಡಲಾರಂಭಿಸಿದ್ದಳು. ಇದರಿಂದ ಬೇಸತ್ತಿದ್ದ ಆರೋಪಿ ಏಪ್ರಿಲ್ 12 ರಂದು ಕೆಲಸ ಮಾಡುತ್ತಿದ್ದ ಮನೆಯವರೆಲ್ಲಾ ಮುಂಬೈಗೆ ತೆರಳಿದ್ದಾಗ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ ಹಾಗೂ ವಜ್ರದ ಒಡವೆಗಳನ್ನ ಕದ್ದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮನೆಯವರು ವಾಪಸ್ ಬಂದಾಗ ಕಳ್ಳತನದ ವಿಚಾರ ಬಯಲಾಗಿತ್ತು.