ಹುಬ್ಬಳ್ಳಿ: ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡ ಆಗಿದ್ದಾನೆ ಎಂದು ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?: ಕಳೆದ ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಮೃತನನ್ನು ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ(40) ಎಂದು ಗುರುತಿಸಲಾಗಿತ್ತು. ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನವನಗರ ಪೊಲೀಸರು ಎಲ್ಲ ಮೂಲಗಳಿಂದ ತನಿಖೆ ಮಾಡಿ ಸತ್ಯಾಂಶವನ್ನ ಹೊರ ಹಾಕಿದ್ದಾರೆ.
ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿರುವ ಬಗ್ಗೆ ಪೊಲೀಸರು ತನಿಖೆಯಲ್ಲಿ ದೃಢಪಟ್ಟಿದೆ. ಇವರಿಬ್ಬರ ವಿವಾಹೇತರ ಸಂಬಂಧಕ್ಕೆ ಪತಿ ವಿರೋಧ ವ್ಯಕ್ತಪಡಿಸಿದ್ದ. ವಿಷಯ ಗೊತ್ತಾದ ನಂತರ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿರುವುದಾಗಿ ಪೊಲೀಸರ ಎದುರು ಪತ್ನಿ ಸತ್ಯ ಬಿಚ್ಚಿಟ್ಟಿದ್ದಾಳೆ.
ಇನ್ನು ಆರೋಪಿ ರಿಯಾಜ್ ಅಹ್ಮದ್, ನಾನೇ ಚಂದ್ರಶೇಖರನನ್ನ ಕರೆದೊಯ್ದು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಕಳೆದ ಐದು ವರ್ಷಗಳಿಂದ ನಮ್ಮಿಬ್ಬರ ನಡುವೆ ವಿವಾಹೇತರ ಸಂಬಂಧ ಇತ್ತು. ಇದಕ್ಕೆ ಚಂದ್ರಶೇಖರ ವಿರೋಧ ಮಾಡ್ತಾ ಇದ್ದ. ಆದ್ದರಿಂದ ಕೊಲೆ ಮಾಡಿರುವುದಾಗಿ ರಿಯಾಜ್ ಅಹ್ಮದ್ ನಿಜಾಂಶ ಬಾಯ್ಬಿಟ್ಟಿದ್ದಾನೆ. ಪತ್ನಿಯ ವಿವಾಹೇತರ ಸಂಬಂಧಕ್ಕೆ ಗಂಡ ಕೊಲೆಯಾದರೆ, ಮಾಡಬಾರದ ತಪ್ಪು ಮಾಡಿ ಪತ್ನಿ ಜೈಲು ಪಾಲಾಗಿದ್ದಾಳೆ. ಪತ್ನಿ ಮಾಡಿದ ಕೃತ್ಯಕ್ಕೆ ಈಗ ಮೂರು ಮಕ್ಕಳು ಅನಾಥವಾಗಿವೆ.
ಓದಿ:ಅಪ್ರಾಪ್ತ ಮಗನಿಂದಲೇ ತಾಯಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ತಂದೆ ರಕ್ಷಿಸಲು ತಾನೇ ಶರಣಾಗಿದ್ದ ಮಗ