ಕರ್ನಾಟಕ

karnataka

ETV Bharat / state

ಮಂಡ್ಯ: ಕೌಟುಂಬಿಕ ಕಲಹ, 80 ವರ್ಷದ ದೊಡ್ಡಮ್ಮನನ್ನೇ ಕೊಂದ! - Elderly Woman Killed In Mandya - ELDERLY WOMAN KILLED IN MANDYA

ವ್ಯಕ್ತಿಯೋರ್ವ ತನ್ನ ದೊಡ್ಡಮ್ಮನನ್ನೇ ಮಾರಕಾಸ್ತ್ರದಿಂದ ಚುಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

murder case
ಕೊಲೆ ಆರೋಪಿ ಹರೀಶ್ (ETV Bharat)

By ETV Bharat Karnataka Team

Published : Jun 23, 2024, 1:01 PM IST

Updated : Jun 23, 2024, 1:20 PM IST

ಎಸ್​ಪಿ ಪ್ರತಿಕ್ರಿಯೆ (ETV Bharat)

ಮಂಡ್ಯ:ಕುಡಿದ ಮತ್ತಿನಲ್ಲಿದ್ದವ್ಯಕ್ತಿಯೋರ್ವ ತನ್ನ ವೃದ್ಧ ದೊಡ್ಡಮ್ಮನನ್ನೇ ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿರುವ ಘಟನೆ ನಗರದ ಆನೆಕೆರೆ ಬೀದಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕೆಂಪಮ್ಮ (80) ಹತ್ಯೆಯಾದ ವೃದ್ಧೆ. ಮೃತಳ ಮೈದುನನ ಮಗ ಹರೀಶ್ ಎಂಬಾತನೇ ಕೊಲೆ ಮಾಡಿ ನಗರದ ಸೆಂಟ್ರಲ್ ಪೊಲೀಸ್​ ಠಾಣೆಗೆ ಶರಣಾದ ಆರೋಪಿ. ಗಂಡ ಮೃತಪಟ್ಟ ಬಳಿಕ ವೃದ್ಧೆಯು ಮೈದುನ ರಾಮಕೃಷ್ಣ ಹಾಗೂ ಆತನ ಮಗನಾದ ಹರೀಶನ ಜೊತೆ ಹಲವು ವರ್ಷಗಳಿಂದ ವಾಸವಾಗಿದ್ದರು. ಶನಿವಾರ ಮನೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು. ಇಂದು ಬೆಳಗ್ಗೆ ಮದ್ಯ ಸೇವಿಸಿದ್ದ ವ್ಯಕ್ತಿಯು ದೊಡ್ಡಮ್ಮನ ಜೊತೆ ಜಗಳ ತೆಗೆದು, ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್​ಪಿ ಪ್ರತಿಕ್ರಿಯೆ:ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಮಂಡ್ಯ ಎಸ್​​ಪಿ ಯತೀಶ್ ಎನ್., ''80 ವರ್ಷದ ವೃದ್ಧೆಯನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಆರೋಪಿ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಯಾದ ವೃದ್ಧೆ ಹಾಗೂ ಬಾಮೈದ ಮತ್ತು ಆತನ ಮಗ ಒಟ್ಟಿಗೆ ವಾಸವಿದ್ದರು. ನಿನ್ನೆ ವೃದ್ಧೆಯ ವಿಚಾರವಾಗಿ ಮನೆಯಲ್ಲಿ ಆರೋಪಿ ಹಾಗೂ ಆತನ ತಂದೆ ನಡುವೆ ಜಗಳ ಆಗಿತ್ತು. ಇಂದು ಬೆಳಗ್ಗೆ ಆರೋಪಿ ಮತ್ತೆ ಜಗಳವಾಡಿದ್ದು, ವೃದ್ಧೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ'' ಎಂದರು.

''ಈವರೆಗಿನ ಮಾಹಿತಿ ಪ್ರಕಾರ, ಮೃತ ವೃದ್ಧೆ ಹಾಗೂ ಬಾಮೈದನ ನಡುವೆ ಸಂಬಂಧ ಇತ್ತು ಎಂಬ ಮಾಹಿತಿ ಇದೆ. ಇದೇ ವಿಚಾರಕ್ಕೆ ಕೋಪದಲ್ಲಿ ಗಲಾಟೆ ನಡೆಯುತ್ತಿತ್ತು. ಇದರ ಹಿನ್ನೆಲೆಯಲ್ಲಿ ತಂದೆಯು ತನ್ನ ಕ್ಷೌರಿಕ ಕೆಲಸಕ್ಕೆಂದು ಅಂಗಡಿಗೆ ಹೋದಾಗ ಕೊಲೆ ಮಾಡಿದ್ದಾನೆ. ಆದರೆ, ಅನೈತಿಕ ಸಂಬಂಧ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಆ ಬಳಿಕವೇ ದೃಢಪಡಲಿದೆ. ಕಳೆದ ಹಲವು ವರ್ಷಗಳಿಂದ ಮೂವರೂ ಒಟ್ಟಿಗೆ ಇದ್ದರೆಂದು ತಿಳಿದುಬಂದಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ'' ಎಂದು ಎಸ್​​ಪಿ ಯತೀಶ್ ಎನ್. ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆರೋಪಿಯ ತಂದೆ ರಾಮಕೃಷ್ಣ, ''ನನ್ನ ಮಗನೇ ಇಂದು ಬೆಳಗ್ಗೆ ಕುಡಿದು ಬಂದು ಗಲಾಟೆ ಮಾಡಿ, ನನ್ನ ಅತ್ತಿಗೆ (ವೃದ್ಧೆ) ಯ ಕೊಲೆ ಮಾಡಿದ್ದಾನೆ. ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ನಾವು ಮೂವರೂ ಒಟ್ಟಿಗೆ ವಾಸವಿದ್ದೆವು. ನಾನು ಕ್ಷೌರಿಕ ಕೆಲಸ ಮಾಡಿಕೊಂಡಿದ್ದು, ಅಂಗಡಿಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಜಗಳ ಮಾಡಿ, ಕೊಲೆಗೈದ ಬಳಿಕ ನನಗೆ ಕರೆ ಮಾಡಿ ತಿಳಿಸಿದ್ದ. ತಮಾಷೆ ಮಾಡುತ್ತಿದ್ದಾನೆಂದು ನಾನು ಅಂದುಕೊಂಡಿದ್ದೆ. ಬಳಿಕ ನಾನೇ ಆತನಿಗೆ ಪೊಲೀಸರಿಗೆ ಶರಣಾಗುವಂತೆ ಹೇಳಿದೆ. ಆತ ಯಾವಾಗಲೂ ಮದ್ಯ ಸೇವಿಸಿ, ತಿರುಗಾಡುತ್ತ ಜಗಳ ಮಾಡುತ್ತಿರುತ್ತಿದ್ದ. ಮಹಿಳೆಯ ಗಂಡ ತೀರಿಕೊಂಡಾಗಿನಿಂದಲೂ ನಾನೇ ಅವಳನ್ನು ಸಾಕುತ್ತಿದ್ದೆ. ಅವಳ ಮಗ ಕೂಡ ತೀರಿಕೊಂಡಿದ್ದಾನೆ'' ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಅನೈತಿಕ ಸಂಬಂಧ ಆರೋಪವನ್ನು ಅವರು ನಿರಾಕರಿಸಿದ್ದು, ''ಆ ರೀತಿ ಏನೂ ಇಲ್ಲ, ಯಾವ ಸಂಬಂಧವೂ ಇಲ್ಲ. ಅದೆಲ್ಲ ಸುಳ್ಳು'' ಎಂದಿದ್ದಾರೆ.

ಸ್ಥಳಕ್ಕೆ ಎಎಸ್ಪಿ ಸಿ.ಇ.ತಿಮ್ಮಯ್ಯ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿ‌, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ವಿವಾಹಿತೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ, ವಿರೋಧಿಸಿದ್ದಕ್ಕೆ ಚಾಕು ಇರಿತ - Rape Attempt On Woman

Last Updated : Jun 23, 2024, 1:20 PM IST

ABOUT THE AUTHOR

...view details