ಬೆಂಗಳೂರು: ಸಹೋದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಅನುಮಾನಗೊಂಡು ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಆರೋಪದ ಮೇಲೆ ಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಜೆ.ಪಿ.ನಗರದ 5ನೇ ಹಂತದಲ್ಲಿರುವ ವಿನಾಯಕ ನಗರದಲ್ಲಿ ಕಳೆದ ಮಾರ್ಚ್ 31 ರಂದು ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಹಿಳೆ ನೀಡಿದ ದೂರು ಆಧರಿಸಿ ಆಕೆಯ ಗಂಡ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
2012 ರಲ್ಲಿ ನವೀನ್ ಜೊತೆ ಮದುವೆಯಾಗಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಹೆಚ್.ಎಸ್.ಆರ್ ಲೇಔಟ್ನಲ್ಲಿ ಹೃತಿಕ್ ರೋಷನ್ ಬ್ರ್ಯಾಂಡ್ನಲ್ಲಿ ಫುಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಆಟೋ ಚಾಲಕನಾಗಿದ್ದಾನೆ. ಮದುವೆಯಾದ ಆರಂಭದಿಂದಲೂ ತನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಫೋನ್ನಲ್ಲಿ ಯಾರ ಜೊತೆ ಮಾತನಾಡಿದರೂ ಸಂಶಯ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಗಂಡನಿಗೆ ನನ್ನ ಮೇಲೆ ಅನುಮಾನ ಹೆಚ್ಚಾಗಿತ್ತು. ನನ್ನನ್ನು ಸಾಯಿಸಲು 2023 ರ ಸೆಪ್ಟೆಂಬರ್ನಲ್ಲಿ ಬನ್ನೇರುಘಟ್ಟಕ್ಕೆ ಕರೆದೊಯ್ದು ಕಬ್ಬಿಣದ ರಾಡ್ನಿಂದ ಹೊಡೆದು ಹಲ್ಲೆ ಮಾಡಿ, ಸಾಯಿಸಲು ಯತ್ನಿಸಿದ್ದ. ಹೇಗೋ ಅಪಾಯದಿಂದ ಪಾರಾಗಿದ್ದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.