ಕರ್ನಾಟಕ

karnataka

ETV Bharat / state

ರಷ್ಯಾದಲ್ಲಿ ಸಿಲುಕಿರುವ ಯುವಕರ ರಕ್ಷಣೆಗೆ ಕೋರಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ - Mallikarjun Kharge

ರಷ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿದೇಶಾಂಗ ಸಚಿವ ಜೈಶಂಕರ್​​ಗೆ ಪತ್ರದ ಮೂಲಕ ಕೋರಿದ್ದಾರೆ.

Mallikarjun Kharge
ರಷ್ಯಾದಲ್ಲಿ ಸಿಲುಕಿರುವ ಯುವಕರ ರಕ್ಷಣೆಗೆ ಕೋರಿ ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ

By ETV Bharat Karnataka Team

Published : Feb 23, 2024, 6:36 AM IST

ಬೆಂಗಳೂರು: ರಷ್ಯಾದಲ್ಲಿ ಸಿಲುಕಿರುವ ಕಲಬುರಗಿಯ ಮೂವರು ಸೇರಿ ಭಾರತೀಯರನ್ನು ರಕ್ಷಿಸುವಂತೆ ಕೋರಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ವಿವಿಧ ಮಾಧ್ಯಮ‌ ವರದಿ ಪ್ರಕಾರ ಕಳೆದ ಒಂದು ವರ್ಷದಿಂದ ಸುಮಾರು 100 ಭಾರತೀಯರನ್ನು ರಷ್ಯಾ ಆರ್ಮಿಯ ಸಹಾಯಕರಾಗಿ ನೇಮಕ ಮಾಡಲಾಗುತ್ತಿದೆ. ಈ‌ ಪೈಕಿ ಕೆಲವರನ್ನು ಬಲವಂತವಾಗಿ ರಷ್ಯಾ ಉಕ್ರೇನ್ ಯುದ್ಧದಲ್ಲಿ ಬಳಸಲಾಗುತ್ತಿದೆ. ಇವರಲ್ಲಿ ಹಲವರ ಪಾಸ್​​ಪೋರ್ಟ್ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಇದರಿಂದ ಅವರು ರಷ್ಯಾದಲ್ಲಿ ಸಿಲುಕಿ, ಭಾರತಕ್ಕೆ ಮರಳದ ಪರಿಸ್ಥಿತಿ ಎದುರಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಲಬುರಗಿಯ ಮೂವರು, ತೆಲಂಗಾಣದ ಒಬ್ಬ ವ್ಯಕ್ತಿಯನ್ನು ರಷ್ಯಾ ಆರ್ಮಿ ಸಹಾಯಕರಾಗಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿರುವುದು ಗಮನಕ್ಕೆ ಬಂದಿದೆ. ಆದರೆ, ಅವರನ್ನು ಬಲವಂತವಾಗಿ ಖಾಸಗಿ ಸೇನೆಯಲ್ಲಿ ಯುದ್ಧ ಮಾಡಲು ನಿಯೋಜಿಸಲಾಗಿದೆ.‌ ಇದರ ಗಾಂಭೀರ್ಯತೆಯನ್ನು ಕಡೆಗಣಿಸುವ ಹಾಗಿಲ್ಲ. ಈ ಯುವಕರ ಪ್ರಾಣ ಅಪಾಯದಲ್ಲಿದೆ. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸುವಂತೆ ಪತ್ರದ ಮುಖೇನ ಮನವಿ ಮಾಡಿದ್ದಾರೆ. ರಷ್ಯಾದಲ್ಲಿ ಪ್ರಾಣದ ಅಪಾಯದಲ್ಲಿರುವ ಯುವಕರನ್ನು ರಕ್ಷಿಸಿ ಭಾರತಕ್ಕೆ ಕರೆತರುವಲ್ಲಿ ನೀವು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಜೈಶಂಕರ್ ಅವರಿಗೆ ಖರ್ಗೆ ಕೋರಿದ್ದಾರೆ.

ಕಲಬುರಗಿ ಯುವಕರ ಕುಟುಂಬಸ್ಥರ ಅಳಲು:ಸೆಕ್ಯೂರಿಟಿ ಗಾರ್ಡ್ ಉದ್ಯೋಗಕ್ಕೆಂದು ರಷ್ಯಾಕ್ಕೆ ತೆರಳಿದ್ದ ಕಲಬುರಗಿಯ ಮೂವರು ಯುವಕರನ್ನು ಅಲ್ಲಿ ಸೇನೆಗೆ ನಿಯೋಜನೆ ಮಾಡಿರುವ ಬಗ್ಗೆ ಅವರ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಆಳಂದ ತಾಲೂಕಿನ ನರೋಣಾ ಗ್ರಾಮದ ಸೈಯದ್ ಇಲಿಯಾಸ್ ಹುಸೇನಿ, ಮೊಹಮ್ಮದ್ ಸಮೀರ್ ಅಹಮದ್ ಹಾಗೂ ಸೋಫಿಯಾ ಮೊಹಮ್ಮದ್ ಎಂಬ ಮೂವರು ರಷ್ಯಾದಲ್ಲಿ ಸಿಲುಕಿದ್ದಾರೆ. ಮುಂಬೈ ಮೂಲದ ಏಜೆಂಟ್​ವೊಬ್ಬರ ಮೂಲಕ ಅಲ್ಲಿಗೆ ತೆರಳಿದ್ದು, ಬಳಿಕ ಸೇನೆಗೆ ಸೇರಿಸಲಾಗಿದೆ ಎಂದು ಅಲ್ಲಿಂದ ಯುವಕರು ವಿಡಿಯೋ ಕಳಿಸಿದ್ದಾರೆ. ಇದರಿಂದ ಪೋಷಕರ ಆತಂಕಗೊಂಡಿದ್ದಾರೆ.

ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡ ಯುವಕರ ಕುಟುಂಬಸ್ಥರು ಸದ್ಯ ಕಣ್ಣೀರಿಡುತ್ತಿದ್ದಾರೆ. ಸೈಯದ್ ಇಲಿಯಾಸ್ ಹುಸೇನ್ ತಂದೆ ಹೆಡ್ ಕಾನ್ಸ್​ಟೇಬಲ್​​ ನವಾಜ್ ಕಾಳಗಿ ಈಗಾಗಲೇ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿ, ಮಕ್ಕಳ ರಕ್ಷಣೆಗೆ ಮನವಿ ಮಾಡಿದ್ದಾರೆ. ''ನನ್ನ ಮಗ ಸೇರಿದಂತೆ ಇಲ್ಲಿನ ಕೆಲವು ಹುಡುಗರು ಈ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷದ ನಂತರ ಊರಿಗೆ ಬಂದಿದ್ದರು. ಬಳಿಕ ಮುಂಬೈ ಮೂಲದ ಏಜೆಂಟರ್​​ವೊಬ್ಬರ ಸಂಪರ್ಕ ಪಡೆದಿದ್ದು, ಸೆಕ್ಯೂರಿಟಿ ಗಾರ್ಡ್ ಕೆಲಸ ಇರುವ ಮಾಹಿತಿ ಸಿಕ್ಕಿತ್ತು. ಅದರಂತೆ ನನ್ನ ಮಗ ಸೇರಿದಂತೆ ಹಲವರು ವೀಸಾ ಮತ್ತು ಪಾಸ್​ಪೋರ್ಟ್​ ಸಿದ್ಧಪಡಿಸಿಕೊಂಡು ಚೆನ್ನೈ ಮೂಲಕ ರಷ್ಯಾದ ಮಾಸ್ಕೋಗೆ ತೆರಳಿದ್ದಾರೆ. ಆದರೆ, 15 ದಿನಗಳ ಬಳಿಕ ಮತ್ತೆ ಕರೆ ಮಾಡಿ ನಮ್ಮನ್ನು ಉಕ್ರೇನ್ ಗಡಿ​ಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಅನುಮಾನ ಮೂಡಿದ್ದು, ಏಜೆಂಟ್​ ಮೋಸ ಮಾಡಿರುವುದು ಗೊತ್ತಾಯಿತು. ಇದರಿಂದ ನಮ್ಮ ಮಕ್ಕಳು ಸಂಕಷ್ಟದಲ್ಲಿ ಸಿಲುಕಿದ್ದಾರೆ'' ಎಂದು ಸೈಯದ್​ ತಂದೆ ಹೇಳಿದ್ದಾರೆ.

ಇದನ್ನೂ ಓದಿ:ರಷ್ಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕಲಬುರಗಿ ಮೂವರು ಯುವಕರು; ಸುರಕ್ಷಿತವಾಗಿ ಕರೆತರಲು ಪೋಷಕರ ಮನವಿ

ABOUT THE AUTHOR

...view details