ವಕ್ಫ್ ಮಂಡಳಿಯ ಮೂಲಕ ಕಾನೂನು ಹೋರಾಟ ಮಂಗಳೂರು: ಮಳಲಿ ಮಸೀದಿ ಕಟ್ಟಡದಲ್ಲಿ ಹಿಂದೂ ದೇವಾಲಯದ ಕುರುಹು ಇದೆ ಎಂದು ಉಂಟಾಗಿರುವ ವಿವಾದ ನ್ಯಾಯಾಲಯದಲ್ಲಿದ್ದು, ಈ ಪ್ರಕರಣದಲ್ಲಿ ವಕ್ಫ್ ಮಂಡಳಿಯು ಕಾನೂನು ಹೋರಾಟ ಮಾಡಲು ಮುಂದಾಗಿದೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಳಲಿ ಹಳೆಯ ಮಸೀದಿಯಾಗಿರುವ ಕಾರಣ ಮತ್ತು ಈಗಿನ ಜನಸಂಖ್ಯೆ ಹೆಚ್ಚಿರುವ ಕಾರಣ ಅದರ ನವೀಕರಣ ಮಾಡಲು ಆಡಳಿತ ಸಮಿತಿ ಹೊರಟಿತ್ತು. ಈ ಬಗ್ಗೆ ಕೆಲವರು ಗೊಂದಲ ನಿರ್ಮಿಸಲು ಹೊರಟ ಘಟನೆ ನಡೆದಿದೆ. ಅದನ್ನು ಹೊರತುಪಡಿಸಿ ಅಲ್ಲಿನ ಸಾಕಷ್ಟು ಸ್ಥಳೀಯರು ಮಸೀದಿಯ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ಈ ಮಸೀದಿಯ ಆಸ್ತಿ ವಕ್ಫ್ಗೆ ಸಂಬಂಧಪಟ್ಟಿರುವ ಕಾರಣ, ಮುಂದೆ ವಕ್ಫ್ ಮಂಡಳಿಯ ಮೂಲಕವೂ ಕಾನೂನು ಹೋರಾಟ ನಡೆಸಲಾಗುವುದು. ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದರು.
ಮಂಗಳೂರು ತಾಲೂಕಿನ ತೆಂಕ ಉಳಿಪ್ಪಾಡಿ ಗ್ರಾಮದ ಮಳಲಿ ಪೇಟೆಯಲ್ಲಿರುವ ಮಸೀದಿ ಕಟ್ಟಡದ ಬಗ್ಗೆ ಎದ್ದಿರುವ ವಿವಾದಗಳ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ಜುಮ್ಮಾ ಮಸೀದಿಯು ಇತ್ತು ಎನ್ನುವುದಕ್ಕೆ ದಾಖಲೆಗಳಿದೆ. ಈ ಮಸೀದಿಯ ಆಸ್ತಿ ವಕ್ಪ್ ಆಸ್ತಿಯ ವ್ಯಾಪ್ತಿಗೆ ಒಳ ಪಡುವುದರಿಂದ ಅದರ ಬಗ್ಗೆ ವಿವಾದಗಳಿದ್ದರೆ ವಕ್ಫ್ ಟ್ರಿಬ್ಯೂನಲ್ನಲ್ಲಿ ವಿಚಾರಣೆ ನಡೆಯಲಿ ಎಂಬುದು ನಮ್ಮ ವಾದವಾಗಿತ್ತು. ಈ ಬಗ್ಗೆ ಇದೀಗ ಹೈಕೋರ್ಟ್ ಅದನ್ನು ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ಆದೇಶ ನೀಡಿದೆ ಎಂದರು.
ಎಲ್ಲಿಯೇ ವಿಚಾರಣೆ ನಡೆದರು ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆ ಇಗಿದೆ. ನಮ್ಮ ಬಳಿ ಇರುವ ದಾಖಲೆಗಳೊಂದಿಗೆ ವಿಚಾರಣೆಯನ್ನು ಎದುರಿಸುತ್ತೇವೆ. ರಾಣಿ ಅಬ್ಬಕ್ಕನ ಕಾಲದಲ್ಲೂ ಇಲ್ಲಿ ಮಸೀದಿ ಇತ್ತು ಎನ್ನುವುದನ್ನು ಖ್ಯಾತ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರು ತಮ್ಮ ಅಬ್ಬಕ್ಕ ಸಂಕಥನ ಕೃತಿಯಲ್ಲಿ ವಿದೇಶಿ ಪ್ರವಾಸಿ ಕಂಡ ಅಬ್ಬಕ್ಕ ಲೇಖನದಲ್ಲಿ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಈ ಮಸೀದಿ ಬ್ರಿಟಿಷರ ಕಾಲದಲ್ಲಿ ಇತ್ತು. ಕಂದಾಯ ಇಲಾಖೆಯ ಹಳೆಯ ದಾಖಲೆಯಲ್ಲಿಯೂ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆ ಇದೆ. ಮಸೀದಿಯ ನಿರ್ವಹಣೆಗೆ ಪ್ರಾಚೀನ ಕಾಲದಲ್ಲಿ ದೀಪದ ಎಣ್ಣೆ ಬಳಿಕ ತಸ್ತೀಕ್, ಬ್ರಿಟಿಷ್ ಕಾಲದಲ್ಲಿ ಚಲಾವಣೆಯ ನಾಣ್ಯಗಳ ರೂಪದಲ್ಲಿ ತಸ್ತೀಕ್ ನೀಡಲಾಗಿರುವ ದಾಖಲೆಗಳಿವೆ. ಮಸೀದಿಯ ಆಸ್ತಿಯನ್ನು ವಕ್ಫ್ನಲ್ಲಿ ನೋಂದಣಿ ಮಾಡುವಾಗ ತಹಶಿಲ್ದಾರರ ಮೂಲಕ ಪರಿಶೀಲನೆಯಾಗಿ, 2004ರಲ್ಲಿ ಸರ್ವೆ ನಡೆದು ದಾಖಲಾಗಿದೆ ಎಂದರು. ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ಒಮ್ಮೆ ಅದು ವಕ್ಫ್ ಆಸ್ತಿ ಎಂದು ದಾಖಲಾದ ಬಳಿಕ ಅದು ವಕ್ಫ್ ಸುಪರ್ದಿಗೆ ಬರುತ್ತದೆ.
ಆದುದರಿಂದ ಈ ಬಗ್ಗೆ ವಿವಾದಗಳಿದ್ದರೆ ವಕ್ಫ್ ನ್ಯಾಯ ಮಂಡಳಿ ವಿಚಾರಣೆ ಮಾಡುತ್ತದೆ. ಆದರೆ ಇತ್ತೀಚೆಗೆ ಕೆಲವರು ಅದರಲ್ಲಿ ದೇವಾಲಯದ ಕುರುಹುಗಳಿವೆ ಎಂದು ವಿವಾದ ಮಾಡಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ವಿರುದ್ಧ ಮಸೀದಿಯ ಆಡಳಿತ ಮಂಡಳಿ ಹೈಕೋರ್ಟ್ಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ಆದೇಶ ನೀಡಿದೆ ಹೊರತಾಗಿ ಅದು ಮಸೀದಿಯ ಜಾಗ ಅಲ್ಲ ಎಂದು ತೀರ್ಪು ನೀಡಿಲ್ಲ. ಈ ಬಗ್ಗೆ ಗೊಂದಲ ಬೇಡ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವುದಾಗಿ ಎಂದು ಅವರು ಹೇಳಿದರು.
ಇದನ್ನೂ ಓದಿ:ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ: ಬಜರಂಗದಳ ಮುಖಂಡ ಸುನಿಲ್ ಕೆ ಆರ್