ವಿಜಯನಗರ/ಹಾವೇರಿ: 'ತುಂಬಿದ ಕೊಡ ತುಳುಕಿತಲೇ ಪರಾಕ್' ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಶುಕ್ರವಾರ ನಡೆದ ಪ್ರಸ್ತುತ ವರ್ಷದ ಕಾರ್ಣಿಕ ಇದಾಗಿದೆ.
ಎಲ್ಲ ಜಾತ್ರೆಗಳಲ್ಲೂ ರಥೋತ್ಸವ ನಡೆದರೆ, ಇಲ್ಲಿ ಅದು ನಡೆಯುವುದಿಲ್ಲ. ಬದಲಿಗೆ 11 ದಿನಗಳ ಉಪವಾಸ ಇರುವ ಗೊರವಯ್ಯ 18 ಅಡಿ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ. ಇದನ್ನು ವರ್ಷದ ಭವಿಷ್ಯವಾಣಿ ಎಂದೇ ಪರಿಗಣಿಸಲಾಗುತ್ತದೆ.
ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಸಂಜೆ 5.30ಕ್ಕೆ ಬಿಲ್ಲನೇರಿದ ಗೊರವಯ್ಯ ರಾಮಪ್ಪಜ್ಜ 'ತುಂಬಿದ ಕೊಡ ತುಳುಕೀತಲೇ ಪರಾಕ್' ಎಂದು ನುಡಿದು ಕೆಳಗೆ ಧುಮುಕಿದರು. ರಾಮಪ್ಪಜ್ಜ ಬಿಲ್ಲೇರಿ ಸದ್ದಲೇ ಎನ್ನುತ್ತಿದ್ದಂತೆ ಲಕ್ಷಾಂತರ ಸಂಖ್ಯೆಯಲ್ಲಿದ್ದ ಜನಸ್ತೋಮ ಸ್ಥಬ್ಧವಾಯಿತು. ಈ ಕಾರ್ಣಿಕ ಕೇಳಲು ರಾಜ್ಯ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಭಕ್ತರು ಮೈಲಾರಕ್ಕೆ ಆಗಮಿಸಿದ್ದರು.
ಮೈಲಾರದಲ್ಲಿ ಕಾರ್ಣಿಕ ನುಡಿದ ಗೊರವಯ್ಯ (ETV Bharat) ಗೊರವಪ್ಪಜ್ಜ ಕಾರ್ಣಿಕ ನುಡಿಯುತ್ತಿದ್ದಂತೆ ಭಕ್ತರು ಕಾರ್ಣಿಕ ವಿಶ್ಲೇಷಣೆ ಮಾಡಲಾರಂಭಿಸಿದ್ದಾರೆ. ಮೈಲಾರ ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು, ''ಕಾರ್ಣಿಕವು ಶುಭ ಸೂಚಕವಾಗಿದೆ'' ಎಂದು ತಿಳಿಸಿದರು.
ಮೈಲಾರಲಿಂಗೇಶ್ವರ ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂತಲೇ ಜನರು ನಂಬಿಕೊಂಡು ಬರುತ್ತಿದ್ದಾರೆ. ಹಲವಾರು ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ಎಲ್ಲಿಲ್ಲದ ಮಹತ್ವವಿದೆ. ವಿಶೇಷವಾಗಿ ರೈತಾಪಿ ವರ್ಗದ ಜನರು ಮೈಲಾರಲಿಂಗೇಶ್ವರ ಕಾರ್ಣಿಕವಾಣಿಯ ಆಧಾರದ ಮೇಲೆಯೇ ವರ್ಷದ ಮಳೆ ಬೆಳೆ ನಿರ್ಧರಿಸುತ್ತಾರೆ.
ಜಾತ್ರೆ ಹಿನ್ನೆಲೆಯಲ್ಲಿ ಫೆಬ್ರವರಿ 4ರಿಂದಲೇ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಹಾಲು ಉಕ್ಕಿಸುವುದು, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರತಿದಿನ ಎರಡು ಬಾರಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡ ಗೊರವಯ್ಯ ಇಂದು ಕಾರ್ಣಿಕ ನುಡಿದಿದ್ದಾರೆ. ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಈ ವರ್ಷದ ಭವಿಷ್ಯವಾಣಿಗೆ ಸಾಕ್ಷಿಯಾದರು.
ಇದನ್ನೂ ಓದಿ:'ತುಂಬಿದ ಕೊಡ ಉರಡೀತಲೇ, ತುಪ್ಪದ ಕೊಡ ಉಕ್ಕೀತಲೇ ಪರಾಕ್': ಕಾರ್ಣಿಕ ನುಡಿದ ಗೊರವಪ್ಪ