ಮೈಸೂರು: ಮಹಾತ್ಮ ಗಾಂಧೀಜಿ ಎರಡು ಬಾರಿ ಭೇಟಿ ನೀಡಿದ್ದ ಬದನವಾಳು ಚರಕ ಕೇಂದ್ರದಲ್ಲಿ ಇಂದಿಗೂ ಗಾಂಧೀಜಿಯ ಹೆಜ್ಜೆ ಗುರುತುಗಳು ಅಜರಾಮರಾವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರುತಿಸಿಕೊಂಡ ನಂಜನಗೂಡು ತಾಲೂಕು ಬದನವಾಳು ಗ್ರಾಮವು ಗಾಂಧಿ ಚಿಂತನೆಗಳನ್ನು ಮೈಗೂಡಿಸಿಕೊಂಡು, ಗುಡಿ ಕೈಗಾರಿಕೆಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ.
ಗಾಂಧೀಜಿಯವರು 1927 ಹಾಗೂ 1934ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದರ ಫಲವಾಗಿ ನೂರಾರು ಮಹಿಳೆಯರು ಖಾದಿ ಬಟ್ಟೆ ನೇಯ್ಗೆಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. 1927ರಲ್ಲಿ ಗಾಂಧಿಯವರು ಸೈಮನ್ ಆಯೋಗದ ವಿರುದ್ಧ ಹೋರಾಟ ಮಾಡುತ್ತ, ಅದರ ಭಾಗವಾಗಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರನ್ನು ಭೇಟಿಯಾಗಿ ಮೈಸೂರು ಅರಸರು ಬದನವಾಳು ಗ್ರಾಮದಲ್ಲಿ ಆರಂಭಿಸಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಕಂಡು ಸಂತಸಗೊಂಡಿದ್ದರು. ಇದನ್ನು ಪ್ರೇರೇಪಿಸಿದುದರ ಫಲವಾಗಿ ಮತ್ತಷ್ಟು ಗುಡಿ ಕೈಗಾರಿಕೆಗಳು ಆರಂಭಗೊಂಡವು.
ಗಾಂಧಿಯವರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡುವ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆಯ ಉದಯಕ್ಕೆ ಕಾರಣವಾಯಿತು. ಅದರ ಕುರುಹಾಗಿ 1927ನೇ ಇಸವಿ ಹಾಗೂ ಚರಕ ಚಿತ್ರವಿರುವ ಕಲ್ಲನ್ನು ಕೆತ್ತಲಾಗಿದೆ. ಹಾಗೂ ಸ್ಥಳೀಯರ ಮುಂದಾಳತ್ವದಲ್ಲಿ ಗಾಂಧಿಯವರ ಪುತ್ಥಳಿ ಹಾಗೂ ಮಂಟಪ ನಿರ್ಮಿಸಲಾಗಿದೆ.
1934ರಲ್ಲಿ ಹರಿಜನ ಸೇವಕ ಸಂಘದ ಕಾರ್ಯಕ್ರಮಗಳಿಗೆ ಗಾಂಧಿಯವರು ದೇಣಿಗೆ ಸಂಗ್ರಹದ ಭಾಗವಾಗಿ ಮತ್ತೊಮ್ಮೆ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದ್ದರು. ಆಗಲೂ ಕೂಡ ಬದನವಾಳು ಕೇಂದ್ರದ ಚರಕ ಕೇಂದ್ರ ಹೇಗೆ ನಡೆಯುತ್ತಿದೆ ಎಂದು ನೋಡಲು ಮತ್ತೊಮ್ಮೆ ಭೇಟಿಯಾಗಿದ್ದರು.
ಗಾಂಧಿಯವರು ಮೊದಲ ಬಾರಿ ಭೇಟಿ ಕೊಟ್ಟ ನಂತರ ಮೈಸೂರು ಅರಸರ ಒತ್ತಾಸೆಯಂತೆ ಗ್ರಾಮದಲ್ಲಿ ಗ್ರಾಮೀಣ ಗುಡಿ ಕೈಗಾರಿಕೆಗಳಾದ ಬೆಂಕಿ ಕಡ್ಡಿ, ಕೈ ಕಾಗದ (Hand made paper), ಬಡಗಿ ಮತ್ತು ಕಮ್ಮಾರಿಕೆ, ಏಕದಳ ಹಾಗೂ ದ್ವಿದಳ ಧಾನ್ಯ ಪರಿಷ್ಕರಣೆ, ಅವಲಕ್ಕಿ, ಮುರ್ ಮುರಾ, ನಾರಿನ ಉತ್ಪನ್ನಗಳ ತಯಾರಿಕೆ, ಗ್ರಾಮೀಣ ಎಣ್ಣೆ ಮತ್ತು ನಾರಿನ ಉದ್ದಿಮೆಗಳ ತರಬೇತಿ ಮತ್ತು ಉತ್ಪಾದನಾ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಸುಮಾರು 500 ಜನರಿಗೆ ಉದ್ಯೋಗ ನೀಡಲಾಗಿತ್ತು. ಅದನ್ನು ಕಂಡ ಗಾಂಧಿಯವರು ಬಹಳ ಸಂತಸಗೊಂಡಿದ್ದರು ಎಂಬುದನ್ನು ಸ್ಥಳೀಯರು ನೆನೆಯುತ್ತಾರೆ.