ರಾಯಚೂರು:ಹುಚ್ಚುನಾಯಿ ಕಡಿತದಿಂದ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಾರಲದಿನ್ನಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಪಾವನಿ (7), ಆಸೀಯಾ (3) ಅಲ್ಸಿಯಾ (4), ರೇಷ್ಮಾ ಗಾಯಗೊಂಡ ಮಕ್ಕಳು ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ವೇಳೆ ಮನೆ ಬಳಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಹುಚ್ಚುನಾಯಿ ಮಕ್ಕಳ ಮೇಲೆ ದಾಳಿ ನಡೆಸಿದೆ. ಗಾಯಾಳು ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗಾಯಗೊಂಡ ಬಾಲಕಿ ರೇಷ್ಮಾ ಮಾತನಾಡಿ, "ಹುಚ್ಚುನಾಯಿ ಎಲ್ಲಿಂದ ಬಂತೋ ಗೊತ್ತಿಲ್ಲ, ಊರಿಗೆ ಬಂದು ಎರಡು ದಿನಗಳಾಗಿದೆ ಅನ್ಸುತ್ತೆ. ನಿನ್ನೆ ಬೆಳಗ್ಗೆ ಒಂದು ಹುಡುಗಿಗೆ ಕಚ್ಚಿತ್ತು. ಮಧ್ಯಾಹ್ನ ಇಬ್ಬರಿಗೆ ಕಚ್ಚಿದೆ. ಸಾಯಂಕಾಲ ಒಂದು ಹುಡುಗಿಗೆ ಹಾಗೂ ನನಗೆ ಕಚ್ಚಿದೆ. ಮನುಷ್ಯರಿಗೆ ಮಾತ್ರವಲ್ಲದೆ ಒಂದು ದನ, ಎಮ್ಮೆ ಹಾಗೂ ಕುರಿಗೂ ಕಚ್ಚಿದೆ" ಎಂದು ತಿಳಿಸಿದರು.
ಗ್ರಾಮಸ್ಥ ರಾಜಾಸಾಬ್ ಮಾತನಾಡಿ, "ಗ್ರಾಮದೊಳಗೆ ಒಂದು ಹುಚ್ಚುನಾಯಿ ಬಂದಿದ್ದು, ಹೊಲದಲ್ಲಿ ಮಕ್ಕಳು ಆಡುತ್ತಿದ್ದಾಗ ಅಲ್ಲೊಬ್ಬ ಹುಡುಗನಿಗೆ ಕಚ್ಚಿತ್ತು. ಆಗ ಅಲ್ಲಿ ಕೆಲಸ ಮಾಡುತ್ತಿದ್ದವರು ನೋಡಿ, ನಾಯಿಗೆ ಹೊಡೆದಿದ್ದಾರೆ. ಅಲ್ಲಿಂದ ಓಡಿ ಹೋಗಿದ್ದ ನಾಯಿ, ಮತ್ತೆ ಊರೊಳಗೆ ಬಂದು ಐದಾರು ಮಕ್ಕಳಿಗೆ ಕಚ್ಚಿದೆ. ಅಷ್ಟೇ ಅಲ್ಲ, ಒಂದು ಎಮ್ಮೆ ಹಾಗೂ ಒಂದು ಕುರಿಗೆ ಕಚ್ಚಿದೆ. ನಾಯಿಯನ್ನು ಗಮನಿಸಿದ ಗ್ರಾಮಸ್ಥರು ಅದನ್ನು ಸಾಯಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಪೊಲೀಸರಿಗೆ ತಿಳಿಸಿದ್ದೇವೆ. ಅವರು ಗ್ರಾಮಕ್ಕೆ ಬಂದು ನೋಡಿ ಹೋಗಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ:ಗುಂಡ್ಲುಪೇಟೆ ಠಾಣೆ ಆವರಣದಲ್ಲಿ ಪೊಲೀಸರು ಸಾಕಿದ್ದ ನಾಯಿಯಿಂದ ಮೂವರಿಗೆ ಕಡಿತ - dog bite