ಕರ್ನಾಟಕ

karnataka

ETV Bharat / state

ಒಂದಾಗಿ ಬಾಳಲು ಸಾಧ್ಯವಿಲ್ಲವೆಂಬ ಬೇಸರ: ಬೆಂಗಳೂರಲ್ಲಿ ವಿವಾಹಿತನೊಂದಿಗೆ ಯುವತಿ ಆತ್ಮಹತ್ಯೆ - lovers committed suicide - LOVERS COMMITTED SUICIDE

ಒಂದಾಗಿ ಬಾಳಲು ಆಗಲ್ಲವೆಂದು ವಿವಾಹಿತನೊಂದಿಗೆ ಕೆರೆಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ.

ವಿವಾಹಿತನೊಂದಿಗೆ ಆತ್ಮಹತ್ಯೆಗೆ ಶರಣಾದ ಯುವತಿ
ವಿವಾಹಿತನೊಂದಿಗೆ ಆತ್ಮಹತ್ಯೆಗೆ ಶರಣಾದ ಯುವತಿ (ETV Bharat)

By ETV Bharat Karnataka Team

Published : Jul 3, 2024, 2:04 PM IST

ಬೆಂಗಳೂರು: ಒಂದಾಗಿ ಬಾಳಲು ಸಾಧ್ಯವಿಲ್ಲವೆಂದು ನೊಂದ ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ. ಶ್ರೀಕಾಂತ್ (24) ಹಾಗೂ ಅಂಜನಾ (20) ಆತ್ಮಹತ್ಯೆಗೆ ಶರಣಾದವರು. ಮಂಗಳವಾರ ಸಂಜೆ ಅಂಜನಾಪುರದ ತುಳಸಿಪುರ ಕೆರೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಶ್ರೀಕಾಂತ್ ಹಾಗೂ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಅಂಜನಾ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹಿತನಾಗಿದ್ದರೂ ಸಹ ಶ್ರೀಕಾಂತ್ ಅಂಜನಾಳನ್ನ ಪ್ರೀತಿಸುತ್ತಿದ್ದ. ಶ್ರೀಕಾಂತ್ ವಿವಾಹಿತನಾಗಿರುವುದರಿಂದ ಒಟ್ಟಿಗೆ ಬದುಕಲು ಸಾಧ್ಯವಿಲ್ಲವೆಂದು ಇಬ್ಬರು ಸಹ ಬೇಸತ್ತಿದ್ದರು. ಇದರಿಂದ ಸಾಯುವ ನಿರ್ಧಾರಕ್ಕೆ ಬಂದಿದ್ದ ಈ ಜೋಡಿ ಆಟೋದಲ್ಲಿ ಅಂಜನಾಪುರದ ತುಳಸಿಪುರ ಕೆರೆ ಬಳಿ ಬಂದಿದ್ದಾರೆ.

ಬಳಿಕ 'ನಮ್ಮ ಸಾವಿಗೆ ಯಾರು ಕಾರಣರಲ್ಲ, ಒಟ್ಟಿಗೆ ಬದುಕಲು ಆಗದೆ ನಾವು ಸಾಯ್ತಿದ್ದೇವೆ' ಎಂದು ವಿಡಿಯೋ ಚಿತ್ರೀಕರಿಸಿದ್ದ ಅಂಜನಾ, ಅದನ್ನ ಆಟೋದಲ್ಲಿ ಇರಿಸಿದ್ದಾಳೆ. ನಂತರ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ ಕೆರೆಯಲ್ಲಿ ಶ್ರೀಕಾಂತ್ ಮೃತದೇಹ ಪತ್ತೆಯಾಗಿದ್ದು, ಅದನ್ನ ಮೇಲಕ್ಕೆತ್ತುವಾಗ ಅಂಜನಾಳ ಮೃತದೇಹ ಸಹ ಪತ್ತೆಯಾಗಿದೆ.

ಮೃತದೇಹದ ಕುರಿತು ಮಾಹಿತಿ ಕಲೆ ಹಾಕಿದಾಗ ಇಬ್ಬರೂ ಸಹ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದು, ಶ್ರೀಕಾಂತ್ ಕಾಣೆಯಾದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಅಂಜನಾ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್, ''ಮಂಗಳವಾರ ಅಂಜನಾಪುರ ಕೆರೆಯಲ್ಲಿ ಒಂದು ಹೆಣ್ಣು ಮತ್ತೊಂದು ಗಂಡಿನ ಮೃತದೇಹಗಳು ಪತ್ತೆಯಾಗಿವೆ. ಇಬ್ಬರು ಸ್ನೇಹಿತರಾಗಿದ್ದು ಒಟ್ಟಿಗೆ ಓಡಾಡಿಕೊಂಡಿದ್ದರು. ಇಬ್ಬರಲ್ಲಿ ಒಬ್ಬರಿಗೆ ಮದುವೆಯಾಗಿದ್ದರಿಂದ ಮುಂದೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಫೋನ್​ನಲ್ಲಿ ವಿಡಿಯೋ ಮಾಡಿ ಆಟೊದಲ್ಲಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರೆಸಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು - Young Woman Died

ABOUT THE AUTHOR

...view details