ಬೆಂಗಳೂರು:ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಕುಟುಂಬಸ್ಥರ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಕ್ಲೀನ್‌ಚಿಟ್ ನೀಡಿದ್ದಾರೆ. ಮುಖ್ಯಮಂತ್ರಿ ಒಳಗೊಂಡಂತೆ ನಾಲ್ವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಗುರುವಾರ (ಇಂದು) ಮೈಸೂರು ಲೋಕಾಯುಕ್ತ ಅಧಿಕಾರಿಗಳು ತನಿಖಾ ವರದಿ ಸಲ್ಲಿಸಿದ್ದಾರೆ.
11,200 ಪುಟಗಳ ವರದಿ ಸಲ್ಲಿಕೆ: ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ ಹಾಗೂ ಕರ್ನಾಟಕ ಭೂ ಕಬಳಿಕೆ ಕಾಯ್ದೆಗಳು ಒಳಗೊಂಡಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಸಿದ್ದರಾಮಯ್ಯ, ಪತ್ನಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ತನಿಖಾಧಿಕಾರಿ ಎಸ್ಪಿ ಉದೇಶ್ ಸುಮಾರು 11,200 ಪುಟಗಳ 27 ಸಂಪುಟ ಹೊಂದಿರುವ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ತನಿಖಾ ವರದಿಯಲ್ಲಿ 50 ಮಂದಿ ಹೇಳಿಕೆಗಳನ್ನು ನಮೂದಿಸಲಾಗಿದೆ. ವರದಿ ಜೊತೆಗೆ ಕೆಲ ದಾಖಲಾತಿಗಳನ್ನೂ ಸಲ್ಲಿಸಲಾಗಿದ್ದು, ವರದಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.
ಪ್ರಕರಣವು ಸಿವಿಲ್ ಸ್ವರೂಪದಾಗಿದ್ದು, ತನಿಖೆ ನಡೆಸಲು ತಕ್ಕುದಲ್ಲ. ಕಾನೂನಿನ ತಪ್ಪು ತಿಳುವಳಿಕೆ, ಕ್ರಮ ಜರುಗಿಸಲು ಸರಿಯಾದದ್ದು ಅಲ್ಲ. ಪ್ರಮುಖವಾಗಿ ಸಾಕ್ಷ್ಯಾಧಾರಗಳ ಕೊರತೆ ಕಂಡು ಬಂದಿದೆ. ಇದರಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಬಗ್ಗೆ ಆಕ್ಷೇಪಣೆಗಳಿದ್ದರೆ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅಧಿಕಾರಿಗಳು ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಬುಧವಾರ ನೋಟಿಸ್ ಜಾರಿ ಮಾಡಿದ್ದರು.