ಬೆಂಗಳೂರು:ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ ಆರೋಪದಡಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ಅಧಿಕಾರಿಗಳ ಮೇಲೆ ಇಂದು ಏಕಕಾಲದಲ್ಲಿ ರಾಜ್ಯದ 50 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಗ-ನಾಣ್ಯ ಹಾಗೂ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು, ಗದಗ, ಕೊಪ್ಪಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಸುಮಾರು 48 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು ಒಳಗೊಂಡಂತೆ ಇನ್ನಿತರ ಆಸ್ತಿಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ವಿವರ: ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಎಂ.ಲೋಕೇಶ್, ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕಂದಾಯ ನಿರೀಕ್ಷಕ ಎಸ್.ಜಿ.ಸುರೇಶ್, ಬಿಬಿಎಂಪಿಯ ವಿದ್ಯಾರಣ್ಯಪುರ ಉಪವಿಭಾಗದ ತೆರಿಗೆ ನಿರೀಕ್ಷಕ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ಸುನೀಲ್ ಕುಮಾರ್, ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಕೆ. ಈಕೇಶ್ ಬಾಬು, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಸಶಸ್ತ್ರ ವಿಭಾಗದ ಡಿವೈಎಸ್ಪಿ ನಂಜುಂಡಯ್ಯ, ಗದಗ ಜಿಲ್ಲೆೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಸ್‌ಡಿಎ ಲಕ್ಷ್ಮಣ್ ಕೊನೆರಪ್ಪ ಕರಣಿ, ಕಲಬುರಗಿಯ ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ರಾಮಪ್ಪ ಪಾಂಡು ಜಾಧವ್, ಕೊಪ್ಪಳ ಜಿಲ್ಲೆೆಯ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ರಮೇಶ್ ಬಿ.ಅಗಡಿ, ಚಿತ್ರದುರ್ಗ ಜಿಲ್ಲೆೆಯ ಹಿರಿಯೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್ ಅವರಿಗೆ ಸೇರಿದ ಕಚೇರಿ, ಮನೆ, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಆಯಾ ವ್ಯಾಪ್ತಿಯ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ದಾಳಿಯಲ್ಲಿ 10 ಮಂದಿ ಅಧಿಕಾರಿಗಳಿಂದ 48,55,40,583 ರೂ. ಮೌಲ್ಯದ ಅಸಮತೋಲನ ಆಸ್ತಿಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.
ಯಾವ ಅಧಿಕಾರಿ ಮನೆಯಲ್ಲಿ ಏನೆಲ್ಲಾ ಸಿಕ್ತು? ಸಂಪೂರ್ಣ ವಿವರ:
ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಎಂ.ಲೋಕೇಶ್ ಅವರಿಗೆ ಸೇರಿದ 5 ಸ್ಥಳಗಳಲ್ಲಿ ದಾಳಿ: 3.57 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಾದ 2 ನಿವೇಶನ, 3 ಮನೆಗಳು, 10 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ, ಚರಾಸ್ತಿಗಳಾದ 3.50 ಲಕ್ಷ ರೂ. ನಗದು, 90 ಲಕ್ಷ ರೂ. ಮೌಲ್ಯದ ಆಭರಣಗಳು, 30 ಲಕ್ಷ ರೂ. ಮೌಲ್ಯದ ವಾಹನಗಳು, 1.90 ಕೋಟಿ ರೂ. ಮೌಲ್ಯದ ಇತರೆ ವಸ್ತುಗಳೂ ಸೇರಿ 3.13 ಕೋಟಿ ರೂ. ಮೌಲ್ಯದ ವಸ್ತುಗಳು ಸಿಕ್ಕಿವೆ. ಒಟ್ಟು 6.70 ಕೋಟಿ ರೂ. ಮೌಲ್ಯ.
ಕಂದಾಯ ನಿರೀಕ್ಷಕ ಎಸ್.ಜಿ.ಸುರೇಶ್- 6 ಸ್ಥಳಗಳಲ್ಲಿ ಶೋಧ: 1.61 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಾದ 3 ನಿವೇಶನ, 2 ಮನೆಗಳು, 1 ಫಾರ್ಮ್ ಹೌಸ್, 4-05 ಎಕರೆ ಕೃಷಿ ಭೂಮಿ, 21.61 ಲಕ್ಷ ರೂ. ಮೌಲ್ಯದ ಚರಾಸ್ತಿಗಳಾದ 3.53 ಲಕ್ಷ ರೂ. ಮೌಲ್ಯದ ಆಸ್ತಿಗಳು, 18 ಲಕ್ಷ ರೂ, ಮೌಲ್ಯದ ಚಿನ್ನಾಭರಣಗಳು ಪತ್ತೆ. ಒಟ್ಟು ಮೌಲ್ಯ 1.82 ಕೋಟಿ ರೂ.
ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ಸುನೀಲ್ ಕುಮಾರ್- 6 ಸ್ಥಳಗಳಲ್ಲಿ ಶೋಧ: 5.17 ಕೋಟಿ ರೂ. ಮೌಲ್ಯದ 1 ನಿವೇಶನ, 3 ಮನೆಗಳು, 1.46 ಕೋಟಿ ರೂ. ಮೌಲ್ಯದ ಚರಾಸ್ತಿಗಳಾದ 2 ಲಕ್ಷ ರೂ. ನಗದು, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 54.50 ಲಕ್ಷ ರೂ. ಮೌಲ್ಯದ ವಾಹನಗಳು, 60 ಲಕ್ಷ ರೂ. ಮೌಲ್ಯದ ಬ್ಯಾಂಕ್ ಎಫ್‌ಡಿ ಹಾಗೂ ಇತರೆ ದಾಖಲೆಗಳು ಪತ್ತೆಯಾಗಿವೆ. ಒಟ್ಟು ಮೌಲ್ಯ 6.63 ಕೋಟಿ ರೂ.