ಹಾಸನ : ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಛತಾ ಟೆಂಡರ್ ಬಿಲ್ ನೀಡಲು ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಹಾಸನ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾಸನ ನಗರಸಭೆ ಆಯುಕ್ತ ನರಸಿಂಹಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ. ಆರ್. ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಗಳು.
ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಛತಾ ಟೆಂಡರ್ ಬಿಲ್ 10.50 ಲಕ್ಷ ರೂ. ಬಿಡುಗಡೆ ಮಾಡಲು ಒಂದೂವರೆ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಲೋಕಾಯುಕ್ತರು ಪ್ಲಾನ್ ಮಾಡಿದ್ದರು. ಅದರಂತೆ ಇಂದು ಈ ಇಬ್ಬರು ಅಧಿಕಾರಿಗಳು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನೂ ಲಂಚದ ಹಣದ ಸಮೇತ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಮೊನ್ನೆ ತಾನೆ ಶಿಕ್ಷಣ ಇಲಾಖೆಯ ಡಿಡಿಪಿಐ ಮತ್ತು ಮೇಲ್ವಿಚಾರಕ ಲೋಕಾ ಬಲೆಗೆ ಬಿದ್ದಿದ್ದರು. ಈ ಪ್ರಕರಣದ ಬೆನ್ನಲ್ಲೇ ಈಗ ನಗರಸಭೆಯ ಮುಖ್ಯಾಧಿಕಾರಿ ಮತ್ತು ಪರಿಸರ ಅಭಿಯಂತರ ಲೋಕಾಯುಕ್ತದ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.