ಕರ್ನಾಟಕ

karnataka

ಮೈಸೂರು: ಠಾಣೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಸಬ್‌ ಇನ್ಸ್​ಪೆಕ್ಟರ್ - Lokayukta Raid on PSI

ಪೊಲೀಸ್ ಠಾಣೆಯಲ್ಲಿ 50 ಸಾವಿರ ರೂ. ಲಂಚ ಪಡೆಯುವಾಗ ಮಹಿಳಾ ಸಬ್ ಇನ್ಸ್​ಪೆಕ್ಟರೊಬ್ಬರು​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

By ETV Bharat Karnataka Team

Published : May 30, 2024, 3:33 PM IST

Published : May 30, 2024, 3:33 PM IST

ಸಬ್‌ ಇನ್ಸ್​ಪೆಕ್ಟರ್‌
ಸಬ್‌ ಇನ್ಸ್​ಪೆಕ್ಟರ್‌ (ETV Bharat)

ಮೈಸೂರು: ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಮಹಿಳಾ ಸಬ್‌ ಇನ್ಸ್​ಪೆಕ್ಟರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ಮೈಸೂರು ಲೋಕಾಯುಕ್ತ ಅಧೀಕ್ಷಕ ವಿ.ಜೆ ಸಜೀತ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ನಗರದ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ 50 ಸಾವಿರ ರೂ. ಹಣ ಪಡೆಯುವಾಗ ಸಬ್‌ ಇನ್ಸ್​ಪೆಕ್ಟರ್‌ ರಾಧಾ ಅವರು ಸಿಕ್ಕಿಬಿದ್ದಿದ್ದಾರೆ. ರಾಧಾ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವುದಾಗಿ ಲೋಕಾಯುಕ್ತ ಅಧೀಕ್ಷಕರು ತಿಳಿಸಿದ್ದಾರೆ. ಮೈಸೂರಿನ ಕೆ ಆರ್ ಮೊಹಲ್ಲಾ ನಿವಾಸಿಯಾದ ಸಿವಿಲ್‌ ಕಾಂಟ್ರಾಕ್ಟರ್‌ ಮಹೇಶ್‌ ಎಂಬುವರು ಮೇ 13 ರಂದು ಮೈಸೂರು ಲೋಕಾಯುಕ್ತ ಠಾಣೆಗೆ ಹಾಜರಾಗಿ ನೀಡಿದ ದೂರಿನ ಆಧಾರದ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

ಕುವೆಂಪು ನಗರದ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ತಮಗೆ ಸೇರಿದ ಚಿನ್ನಾಭರಣ, ಆಸ್ತಿ, ಬ್ಯಾಂಕ್ ಪಾಸ್‌ ಬುಕ್‌, ಲಾಕರ್‌ ಕೀ, ಕಾರ್‌ ಸೇರಿದಂತೆ ಇತರ ಸೊತ್ತನ್ನು ಕುವೆಂಪುನಗರದ ಮಹಿಳಾ ಸಬ್‌ ಇನ್ಸ್​ಪೆಕ್ಟರ್‌ ರಾಧಾ ವಶಕ್ಕೆ ಪಡೆದುಕೊಂಡಿದ್ದರು. ಈ ವಸ್ತುಗಳನ್ನ ವಾಪಸ್‌ ಕೊಡಲು ಎರಡು ಲಕ್ಷ ಹಣ ನೀಡುವಂತೆ ಸಬ್‌ ಇನ್ಸ್​ಪೆಕ್ಟರ್‌ ಬೇಡಿಕೆ ಇಟ್ಟಿದ್ದರು ಎಂದು ಸಿವಿಲ್‌ ಕಾಂಟ್ರಾಕ್ಟರ್‌ ಮಹೇಶ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಂದು ಕಾರ್ಯಾಚರಣೆ ಕೈಗೊಂಡಾಗ ಪೊಲೀಸ್ ಠಾಣೆಯಲ್ಲಿ ಮಹೇಶ್​ ಅವರಿಂದ ಸಬ್​ ಇನ್ಸ್​ಪೆಕ್ಟರ್ ರಾಧಾ 50 ಸಾವಿರ ರೂ. ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ ಠಾಕೂರ್ ಮತ್ತು ಪೊಲೀಸ್ ಮಹಾನಿರೀಕ್ಷಕರಾದ ಸುಬ್ರಹ್ಮಣ್ಣೇಶ್ವರರಾವ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅಧೀಕ್ಷಕರಾದ ಸಜೀತ್ ವಿ.ಜೆ ಅವರ ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ಇಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಸ್ಮಾರ್ಟ್ ಆದ ಲೋಕಾಯುಕ್ತ ಪೊಲೀಸರು: ಮೊಬೈಲ್​​, ಲ್ಯಾಪ್ ಟಾಪ್ ಸಹಿತ ಹೊಸ ಸಮವಸ್ತ್ರ ವಿತರಣೆ - Smart phone for Lokayukta Police

ABOUT THE AUTHOR

...view details