ಬೆಳಗಾವಿ: ಬ್ರಿಟಿಷರನ್ನು ವೀರರಾಣಿ ಚೆನ್ನಮ್ಮ ಸೋಲಿಸಿದ್ದಕ್ಕೆ ಇದೀಗ 200 ವರ್ಷಗಳ ಸಂಭ್ರಮ. ಈ ಐತಿಹಾಸಿಕ ವಿಜಯೋತ್ಸವಕ್ಕೆ ಇಡೀ ನಾಡು ಸಾಕ್ಷಿಯಾಗುತ್ತಿದೆ. ಅತ್ತ ಕಿತ್ತೂರಿನಲ್ಲಿ ಕೋಟೆ ಜೀರ್ಣೋದ್ಧಾರ, ಸಂರಕ್ಷಣೆ ಮತ್ತು ಉತ್ಸವಕ್ಕೆ ರಾಜ್ಯ ಸರ್ಕಾರ ಕೋಟಿ, ಕೋಟಿ ಹಣ ಬಿಡುಗಡೆಗೊಳಿಸಿದೆ. ಆದರೆ, ಇತ್ತ ಚೆನ್ನಮ್ಮನ ಹುಟ್ಟೂರು ಕಾಕತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಬೇಸರದ ಸಂಗತಿ ಎನ್ನುತ್ತಿದ್ದಾರೆ ಸ್ಥಳೀಯರು.
ಬೆಳಗಾವಿಯಿಂದ 7 ಕಿ.ಮೀ. ದೂರದಲ್ಲಿರುವ ಕಾಕತಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ರಾಣಿ ಚೆನ್ನಮ್ಮನಿಗೆ ಜನ್ಮ ಕೊಟ್ಟ ಪುಣ್ಯಭೂಮಿ. ಚೆನ್ನಮ್ಮ ಆಟವಾಡಿ, ಬೆಳೆದ ಇಲ್ಲಿನ ಅರಮನೆ ಈಗ ಸಂಪೂರ್ಣ ನೆಲಸಮವಾಗಿದೆ. ಚೆನ್ನಮ್ಮನ ಪೂರ್ವಜರು ಕಟ್ಟಿದ ಕೋಟೆ ಕೂಡ ಅವಸಾನದ ಅಂಚಿಗೆ ತಲುಪಿದೆ. ಚೆನ್ನಮ್ಮನ ಕುರುಹುಗಳನ್ನು ಸಂರಕ್ಷಿಸಿ, ಕೋಟೆ ಅಭಿವೃದ್ಧಿಪಡಿಸಬೇಕಿದ್ದ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಕಾಕತಿಯಲ್ಲಿ ಚೆನ್ನಮ್ಮನ ತವರು ಮನೆಗೆ ಸೇರಿದ 1 ಎಕರೆ 10 ಗುಂಟೆ ಜಾಗದಲ್ಲಿ ಭವ್ಯ ಅರಮನೆ ಇತ್ತು. ಕಾಲಾಂತರದಲ್ಲಿ ಆ ಅರಮನೆ ಸಂಪೂರ್ಣ ನೆಲಕಚ್ಚಿದ್ದು, ಜಾನುವಾರುಗಳಿಗೆ ನೀರು ಕುಡಿಸಲು ಬಳಸುತ್ತಿದ್ದ ಹಳೆಯ ಡೋಣಿ, ಪಾಳು ಬಿದ್ದ ಒಂದು ಬಾವಿ ಬಿಟ್ಟರೆ ಮತ್ತಾವ ಕುರುಹು ಕೂಡ ಕಾಣಸಿಗುವುದಿಲ್ಲ. ಸುತ್ತಲೂ ಹುಲ್ಲು, ಕಸ, ಗಿಡಗಂಟಿ ಬೆಳೆದಿದ್ದು, ಈ ಜಾಗದಲ್ಲಿ ಅರಮನೆ ನಿಜಕ್ಕೂ ಇತ್ತಾ ಎಂಬ ಅನುಮಾನ ಮೂಡುವಂತ ಸ್ಥಿತಿಯಿದೆ. ಈ ಜಾಗೆ ಚೆನ್ನಮ್ಮನ ತವರು ಮನೆಯ ವಂಶಜರಾದ ಮಹಲಿಂಗಪ್ರಭು ದೇಸಾಯಿ ಅವರ ಒಡೆತನದಲ್ಲಿದ್ದು, ಇವರು ಸದ್ಯ ರೋಣ ತಾಲೂಕಿನ ಇಟಗಿಯಲ್ಲಿ ವಾಸವಿದ್ದಾರೆ.
ಇನ್ನು ಕಾಕತಿ ದೇಸಾಯರು ಸುತ್ತಲಿನ 16 ಹಳ್ಳಿಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಆಡಳಿತಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾಕತಿ ಹೊರ ವಲಯದ ಗುಡ್ಡದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದರು. ಈ ಕೋಟೆಯಲ್ಲಿ ಮೂರು ಕಾವಲು ಗೋಪುರಗಳು ಇದ್ದವು. ಆದರೆ, ನಿರ್ವಹಣೆ ಕೊರತೆ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶೇ.75ರಷ್ಟು ಕೋಟೆ ಬಿದ್ದು ಹೋಗಿದ್ದು, ಇನ್ನು ಕೇವಲ ಶೇ.25ರಷ್ಟು ಮಾತ್ರ ಉಳಿದುಕೊಂಡಿದೆ. ಅದು ಕೂಡ ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ. ಕಾಕತಿಯಲ್ಲಿ ಚೆನ್ನಮ್ಮನ ಅಶ್ವಾರೂಢ ಪುತ್ಥಳಿಯನ್ನು ನಿರ್ಮಿಸಿದ್ದು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬುದು ಗ್ರಾಮಸ್ಥರ ದೂರು.
ಕಡೆಗಣನೆಗೆಆಕ್ರೋಶ: ಕೆಲ ವರ್ಷಗಳ ಹಿಂದೆ ಕಾಕತಿ ಕೋಟೆಗೆ ಹೋಗಲು ಮೆಟ್ಟಿಲು ಮತ್ತು ಗುಡ್ಡದ ಮೇಲೆ ಒಂದಿಷ್ಟು ರಸ್ತೆ ನಿರ್ಮಿಸಿದ್ದು ಬಿಟ್ಟರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕೋಟೆ ಅಭಿವೃದ್ಧಿಪಡಿಸಿ, ಕೋಟೆಯಲ್ಲಿ ರಾಣಿ ಚೆನ್ನಮ್ಮಾಜಿಯ ಭವ್ಯವಾದ ಎತ್ತರದ ಮೂರ್ತಿ ಪ್ರತಿಷ್ಠಾಪಿಸಬೇಕು. ಇನ್ನು ಧ್ವನಿ ಬೆಳಕಿನ ಲೇಸರ್ ಚಿತ್ರೀಕರಣದ ಮೂಲಕ ಇತಿಹಾಸ ತಿಳಿಸುವ ಲೈಟಿಂಗ್ ವ್ಯವಸ್ಥೆ ಮಾಡಿದರೆ ಇದು ಪ್ರಸಿದ್ಧ ಪ್ರವಾಸಿ ತಾಣ ಆಗುವುದರಲ್ಲಿ ಸಂಶಯವೇ ಇಲ್ಲ. ಆದರೆ, ಈ ವಿಚಾರದಲ್ಲಿ ಜಿಲ್ಲಾಡಳಿತ, ಸರ್ಕಾರ ಮನಸ್ಸು ಮಾಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವೀರರಾಣಿ ಚೆನ್ನಮ್ಮನ ವಿಜಯೋತ್ಸವ ಸಮಿತಿ, ಕಾಕತಿ ಅಧ್ಯಕ್ಷ ಡಾ.ಎಸ್.ಡಿ.ಪಾಟೀಲ ಈಟಿವಿ ಭಾರತ ಜೊತೆಗೆ ಮಾತನಾಡಿ, 200ನೇ ವಿಜಯೋತ್ಸವದ ಸವಿನೆನಪಿಗೋಸ್ಕರ ಕಾಕತಿಯಲ್ಲಿ ಅರಮನೆಯ ಪ್ರತಿರೂಪ, ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಅದೇ ರೀತಿ ಗುಡ್ಡದ ಮೇಲಿನ ಕೋಟೆ ಪುನರುಜ್ಜೀವನಗೊಳಿಸಿ, ಉದ್ಯಾನ ನಿರ್ಮಿಸಬೇಕು. ಹೇಗೆ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆಯೋ, ಅದೇ ಮಾದರಿಯಲ್ಲಿ ಇಲ್ಲಿ ಚೆನ್ನಮ್ಮನವರ ಮೂರ್ತಿ ಸ್ಥಾಪಿಸಬೇಕು. ಇನ್ನು ಕಿತ್ತೂರಿನಲ್ಲಿ ಈ ವರ್ಷ ಸಾಕಷ್ಟು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಾಗಾಗಿ, ಕಿತ್ತೂರಿನಷ್ಟೇ ಕಾಕತಿಗೂ ಪ್ರಾಧಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.