ಬೆಂಗಳೂರು :ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ ವಿಧೇಯಕ)-2024 ಅನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವ ಬೇಡಿಕೆ ಪರಿಗಣಿಸದ ಸರ್ಕಾರದ ನಿರ್ಧಾರ ಖಂಡಿಸಿ, ಬಿಜೆಪಿ ಸಭಾತ್ಯಾಗ ಮಾಡಿದ್ದು, ಪ್ರತಿಪಕ್ಷದ ಸಭಾತ್ಯಾಗದ ನಡುವೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ 2024 ಅನ್ನು ಮಂಡನೆ ಮಾಡಿದರು. ನಂತರ ಬಿಲ್ ಕುರಿತು ವಿವರಣೆ ನೀಡಿದ ಡಿಸಿಎಂ, ಈಗಾಗಲೇ ಮಂಗಳೂರಲ್ಲಿ ಈ ವ್ಯವಸ್ಥೆ ಇದೆ. ಇಡೀ ದೇಶದಲ್ಲಿ ಪ್ರೀಮಿಯಂ ಎಫ್ಎಆರ್ (ಫ್ಲೋರ್ ಏರಿಯಾ ರೇಶಿಯೋ) ಇದೆ.
ಟಿಡಿಆರ್ ವ್ಯವಸ್ಥೆಯನ್ನು ನಾವು ಬಿಟ್ಟಿಲ್ಲ. ಮೂಲ ಸೌಕರ್ಯ ಹೆಚ್ಚಳ ಮಾಡುವ ಕಾರಣಕ್ಕೆ ನಾವು ಪ್ರೀಮಿಯಂ ಎಫ್ಎಆರ್ ತಂದಿದ್ದೇವೆ. ಪ್ರೀಮಿಯಂ ಎಫ್ಎಆರ್ 0.4 ಟೈಮ್ಸ್ ಹೆಚ್ಚುವರಿಗೆ ಮಾಡಿಕೊಳ್ಳಬಹುದು. ಈಗಾಗಲೇ ಕಾನೂನು ಇದೆ. ಮಂಗಳೂರಿನವರು ಮಾತ್ರ ಈ ಕಾನೂನು ಬಳಸಿಕೊಳ್ಳುತ್ತಿದ್ದಾರೆ. ಇತರ ಕಡೆಯವರೂ ಬಳಸಿಕೊಳ್ಳಲಿ ಎಂದು ತಿದ್ದುಪಡಿ ತರಲಾಗಿದೆ.
ಬೆಂಗಳೂರಿನಲ್ಲಿ ಹಣವಿಲ್ಲದೆ ಅಭಿವೃದ್ಧಿ ಮಾಡಲಾಗಲ್ಲ. ಒಂದು ಫ್ಲೋರ್ ಅನುಮತಿ ಪಡೆದು ಎರಡು ಮೂರು ಫ್ಲೋರ್ ಕಟ್ಟಿದರೆ ಸಕ್ರಮ ಮಾಡಬಹುದು. ಆದರೆ ಹತ್ತು ಫ್ಲೋರ್ ಕಟ್ಟಲು ಅವಕಾಶವಿಲ್ಲ. ಅವನ್ನು ಸಕ್ರಮಗೊಳಿಸಲಾಗಲ್ಲ. ಅಕ್ಯುಪೆನ್ಸಿ ಸರ್ಟಿಫಿಕೆಟ್ ಇಲ್ಲದೇ ಯಾವ ಕಂಪನಿಯೂ ಅಂತಹ ಕಟ್ಟಡಗಳಿಗೆ ಬರಲ್ಲ. ಅಕ್ಯುಪೆನ್ಸಿ ಸರ್ಟಿಫಿಕೆಟ್ ಮಸ್ಟ್ ಆಗಲಿದೆ. ಹಾಗಾಗಿ ನಾವು ಈ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದರು.
ಬಿಲ್ ಮೇಲೆ ಮಾತನಾಡಿದ ಬಿಜೆಪಿ ಸದಸ್ಯ ನವೀನ್, ತಿದ್ದುಪಡಿ ಕೆಲ ಅಂಶ ಒಪ್ಪಿತವಾದರೂ ಇದರಲ್ಲಿ ಸಾಕಷ್ಟು ಚರ್ಚೆ ಅಗತ್ಯವಿದೆ. ಮಾಲ್ ಆಫ್ ಏಷಿಯಾಗೆ ಯಾರು ಅನುಮತಿ ಕೊಟ್ಟಿದ್ದಾರೋ ಆ ಅಧಿಕಾರಿಯ ಅಪ್ರಿಸಿಯೇಷನ್ ಮಾಡಬೇಕು. ಅಷ್ಟು ದೊಡ್ಡ ಮಾಲ್ಗೆ ಒಂದೇ ಎಂಟ್ರಿ ಒಂದೇ ಎಕ್ಸಿಟ್ ಇದೆ. 2500 ಕಾರು ಒಂದೇ ಕಡೆ ಒಳಗೆ ಹೋಗಬೇಕು. ಒಂದೇ ಕಡೆ ಹೊರಗೆ ಬರಬೇಕು ಎಂದರೆ ಸಂಚಾರ ದಟ್ಟಣೆ ಹೇಗಾಗಬಹುದು. ಅಧಿಕಾರಿಗಳ ಕೈಗೆ ಎಲ್ಲ ಅಧಿಕಾರ ಸಿಕ್ಕರೆ ಇಂತಹ ಸಮಸ್ಯೆ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಬಿಲ್ ಬಗ್ಗೆ ಚರ್ಚಿಸಲು ಸೆಲೆಕ್ಟ್ ಕಮಿಟಿಗೆ ವಹಿಸುವುದು ಸೂಕ್ತ ಎಂದರು. ಬಿಜೆಪಿಯ ಕೇಶವ ಪ್ರಸಾದ್, ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೂಡ ಈ ಬಿಲ್ ಬಗ್ಗೆ ಚರ್ಚೆಗೆ ಸೆಲೆಕ್ಟ್ ಕಮಿಟಿ ಕೊಡಬೇಕು ಎನ್ನುವ ಬೇಡಿಕೆ ಇಟ್ಟರು.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಬೇಡಿಕೆಗೆ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲವನ್ನೂ ಸೆಲೆಕ್ಟ್ ಕಮಿಟಿಗೆ ಹಾಕಿ ಕಾಲಹರಣ ಮಾಡಬಾರದು. ಬೇಕಾದ ಸ್ಪಷ್ಟೀಕರಣ ಪಡೆದು ಬಿಲ್ ಪಾಸ್ಗೆ ಮನವಿ ಮಾಡಿದರು. ನಂತರ ಜೆಡಿಎಸ್ ಸದಸ್ಯರೇ ಸೆಲೆಕ್ಟ್ ಕಮಿಟಿಗೆ ಪ್ರಸ್ತಾಪ ಮಾಡಿದ್ದರೂ ಜೆಡಿಎಸ್ ಉಪನಾಯಕ ಶರವಣ ಬಿಲ್ ಸ್ವಾಗತ ಮಾಡಿದರು. ಇದರಿಂದಾಗಿ ಜೆಡಿಎಸ್ ಬಿಲ್ ಪರವಾಗಿ ನಿಲುವು ವ್ಯಕ್ತಪಡಿಸಿತು.
ನಂತರ ಸದಸ್ಯರ ಚರ್ಚೆಗೆ ಉತ್ತರ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಈ ಬಿಲ್ ಸರಳೀಕರಣ ಮಾಡುತ್ತಿದ್ದೇವೆ. ಮಂಗಳೂರು ಮಾತ್ರವಲ್ಲ, ಬೇರೆ ಬೇರೆ ನಗರದಲ್ಲಿಯೂ ಈ ರೀತಿಯ ಕಾನೂನು ಮಾಡಲು ಅವಕಾಶ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ 40 ಪರ್ಸೆಂಟ್ ಹಣ ಬರಲಿದೆ.
ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ. ಸರಳೀಕರಣವನ್ನು ಮಾಡುತ್ತಿದ್ದೇನೆ. ಸ್ಥಳೀಯ ಆಡಳಿತಕ್ಕೆ ಬಲ ನೀಡುತ್ತಿದ್ದೇವೆ. ಬಾಂಬೆ, ಹೈದರಾಬಾದ್ ಇತರ ನಗರದಲ್ಲಿಯೂ ಇದೇ ವ್ಯವಸ್ಥೆ ಇದೆ. ನಗರಗಳು ಬೆಳೆಯಬೇಕು. ಹುಬ್ಬಳ್ಳಿ-ಧಾರವಾಡ ದೊಡ್ಡ ಅವಳಿ ನಗರ. ಆದರೆ ಅಲ್ಲಿ ಒಳ್ಳೆ ಗಗನಚುಂಬಿ ಕಟ್ಟಡ ಬಂದಿಲ್ಲ. ಅಂತಹ ಬಿಲ್ಡಿಂಗ್ ಬಂದರೆ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗಲಿದೆ. ಬೆಂಗಳೂರು ನಗರಕ್ಕೆ ಮಾತ್ರವಲ್ಲ. ಎಲ್ಲ ನಗರಕ್ಕೂ ಅನ್ವಯವಾಗುವಂತೆ ಈ ಬಿಲ್ ತರಲಾಗುತ್ತಿದೆ ಎಂದರು.