ಬೆಂಗಳೂರು: ವಿಧಾನಸಭೆಯಿಂದ ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಎಂಎಲ್ಸಿ ಸ್ಥಾನಕ್ಕಾಗಿ ವಲಸಿಗರು, ಮೂಲ ಕಾಂಗ್ರೆಸ್ಸಿಗರಿಂದ ಲಾಬಿ ಜೋರಾಗಿದೆ. ಸದ್ಯದ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ಗೆ 7 ಸ್ಥಾನ ಸಿಗಲಿದೆ. ಈ ಸ್ಥಾನಗಳಿಗೆ ಸುಮಾರು 10 ಅಧಿಕ ಆಕಾಂಕ್ಷಿಗಳಿದ್ದು, ಜಾತಿವಾರು, ಪ್ರಾದೇಶಿಕವಾರು ಲೆಕ್ಕಾಚಾರ ನಡೆಯುತ್ತಿದೆ.
ಜಾತಿವಾರು ಲೆಕ್ಕ: 10 ಸ್ಥಾನಗಳಿಗೆ ಒಕ್ಕಲಿಗ ಕೋಟಾದಲ್ಲಿ 2, ಒಬಿಸಿಗೆ 2, ಅಲ್ಪಸಂಖ್ಯಾತರಿಗೆ 1, ದಲಿತ ಬಲಗೈಗೆ 1, ಲಂಬಾಣಿಗೆ 1, ಲಿಂಗಾಯತರಿಗೆ 1 ಸೀಟು ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಶುರುವಾಗಿದೆ. ಇದರ ಮಧ್ಯೆ ಹಿರಿಯರು ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಿಗೆ ಹೊಸಬರು ಕೂಡ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸುಮಾರು 10ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಯಾರಿಗೆ ಕೊಡಬೇಕೆಂಬ ಗೊಂದಲ ಕೈ ನಾಯಕರಲ್ಲಿದೆ.
ಮೂವರು ಬಹುತೇಕ ಫಿಕ್ಸ್?: ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಸಿಎಂ ಪುತ್ರ ಯತೀಂದ್ರ ಅವರಿಗೆ ಮೇಲ್ಮನೆ ಪ್ರವೇಶ ಬಹುತೇಕ ಪಕ್ಕಾ ಎನ್ನಲಾಗಿದೆ. ಇನ್ನೂ ನಾಲ್ಕು ವರ್ಷ ಅಧಿಕಾರದಿಂದ ಯತೀಂದ್ರ ದೂರ ಉಳಿಯುವುದನ್ನು ತಪ್ಪಿಸಲು ಅವರಿಗೆ ಎಂಎಲ್ಸಿ ಸ್ಥಾನ ಕೊಡಿಸುವ ತೀರ್ಮಾನ ನಡೆಸಲಾಗಿದೆ. ಇದಕ್ಕೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿಕೆಶಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಚಿವ ಬೋಸ್ ರಾಜು ಹಾಗೂ ಸಿಎಂ ಆಪ್ತರಾದ ಕೆ. ಗೋವಿಂದರಾಜುರನ್ನು ಮತ್ತೆ ಮುಂದುವರಿಸುವ ತೀರ್ಮಾನಕ್ಕೂ ಬರಲಾಗಿದೆ ಎಂದು ಹೇಳಲಾಗಿದೆ.
ವಲಸಿಗರು, ಹಾಲಿಗಳಿಂದ ತೀವ್ರ ಲಾಬಿ: ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ವಲಸಿಗರೂ ಎಂಎಲ್ಸಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿರುವ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ಪರಿಷತ್ ಟಿಕೆಟ್ಗಾಗಿ ಲಾಬಿಗೆ ಮುಂದಾಗಿದ್ದಾರೆೆ. ಇತ್ತೀಚಿಗೆ ಪಕ್ಷಕ್ಕೆ ಸೇರಿದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಮಾಜಿ ಸಂಸದ ಕರಡಿ ಸಂಗಣ್ಣ ಕೂಡ ಮೇಲ್ಮನೆ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಇತ್ತ ಹಾಲಿ ಸದಸ್ಯರಲ್ಲಿ ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್ ಮತ್ತೊಂದು ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.