ರಾಮನಗರ: ರಾಜ್ಯ ಮಹಿಳಾ ಆಯೋಗಕ್ಕೆ ವಿವಿಧ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಕುಂಬಳಗೂಡು ಪೊಲೀಸರು ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ಕುಂಬಳಗೂಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ ನೋಟಿಸ್ ನೀಡಿ ಬಂದಿದ್ದಾರೆ. ಮಹಿಳಾ ಆಯೋಗದ ಮನವಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಗ್ ಬಾಸ್ ಮನೆಗೆ ತೆರಳಿ ವಿಚಾರಣೆಗೆ ಬರುವಂತೆ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಶೋನಲ್ಲಿ ಮಹಿಳೆಯರ ಸಮಾನತೆಗೆ ಧಕ್ಕೆ ತರಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ ಎಂದು ವಿವಿಧ ಸಂಘಟನೆಗಳು ಆಯೋಗಕ್ಕೆ ದೂರು ನೀಡಿದ್ದವು.
ಸ್ವರ್ಗ ಮತ್ತು ನರಕ ವಿಷಯಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಹೇಳಿಕೆಗಳ ಬಗ್ಗೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯ ಮಹಿಳಾ ಆಯೋಗ ದೂರು ಆಧರಿಸಿ, ಬಿಗ್ ಬಾಸ್ ಸೆಟ್ಗೆ ತೆರಳಿ ನೋಟಿಸ್ ನೀಡಿದ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಸ್ವರ್ಗ, ನರಕ ವಿಚಾರವಾಗಿ ನಡೆದ ಒಟ್ಟು ಸಂಭಾಷಣೆಯ ರಾ ಫುಟೇಜ್ ನೀಡಲು ಸೂಚಿಸಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಒಂದು ವೇಳೆ ಅಸಡ್ಡೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಠಾಣೆಗೆ ಬಂದು ರಾ ಫುಟೇಜ್ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಪ್ರಕರಣಗಳ ಲೆಕ್ಕ ಕೊಟ್ಟ ಜಗದೀಶ್: '50 ಅಲ್ಲ 100 ಕೇಸ್ ಹಾಕಿಸಿಕೊಳ್ತೀನಿ' ಎಂದ ಲೇಡಿ ಸ್ಪರ್ಧಿ
ಈ ಬಗ್ಗೆ ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, "ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ರಾಮೋಹಳ್ಳಿ ಬಳಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಕೆಲ ಸಂಘಟನೆಗಳು ರಾಜ್ಯ ಮಹಿಳಾ ಆಯೋಗ ಆಧ್ಯಕ್ಷರಿಗೆ ಮನವಿ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ನಮಗೊಂದು ಲೆಟರ್ ಬರೆದಿದ್ದಾರೆ. ಈ ಬಗ್ಗೆ ಪೂರ್ತಿ ತನಿಖೆ ನಡೆಸಿ, ಒಂದು ವರದಿ ಕೊಡಲು ತಿಳಿಸಿದ್ದಾರೆ. ಪ್ರಸ್ತುತ, ಆ ರಿಪೋರ್ಟ್ ಒಂದು ಕೊಡಲು ನಾನು ಮಾಗಡಿ ಡಿಎಸ್ಪಿ ಮತ್ತು ಕುಂಬಳಗೂಡ್ ಇನ್ಸ್ಪೆಕ್ಟರ್ ಬಳಿ ಮಾತನಾಡಿದ್ದೇನೆ. ಅವರು ಬಿಗ್ ಬಾಸ್ಗೆ ನೋಟಿಸ್ ತಲುಪಿಸಿದ್ದಾರೆ. ಅಲ್ಲಿ ಏನಾಗಿದೆ ಎಂಬುದರ ಬಗ್ಗೆ ಅತಿ ಶೀಘ್ರದಲ್ಲೇ ನಾವು ಹೇಳಿಕೆಗಳನ್ನು ಪಡೆದು ಪೂರ್ತಿ ರಿಪೋರ್ಟ್ ರೆಡಿ ಮಾಡಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕಳುಹಿಸುತ್ತೇವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚಾನಲ್ನೊಂದಿಗಿನ ನನ್ನ ಸಂಬಂಧ ಅದ್ಭುತ, ನನ್ನವರು ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕೂರುವವನಲ್ಲ: ಸುದೀಪ್
ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಾರಾಂತ್ಯದ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಅವರು ಈ ಪ್ರಶ್ನೆ ಎತ್ತಿದ್ದರು. ನರಕ ನಿವಾಸದಲ್ಲಿರುವ ಮಹಿಳಾ ಸ್ಪರ್ಧಿಗಳಿಗೆ ಏನಾದರು ತೊಂದರೆಯಾಗಿದೆಯೇ ಎಂದು ಕೇಳಿದ್ದರು. ನರಕ ನಿವಾಸದಲ್ಲಿದ್ದ ಮಹಿಳೆಯರೆಲ್ಲರೂ ಪ್ರತಿಕ್ರಿಯಿಸಿ, ನಮಗೆ ಏನೂ ತೊಂದರೆ ಆಗಿಲ್ಲ ಎಂಬಂತೆ ಉತ್ತರಿಸಿದ್ದರು. ಇನ್ನೂ, ಹೆಲ್ ಮತ್ತು ಹೆವೆನ್ ಕಾನ್ಸೆಪ್ಟ್ನೊಂದಿಗೆ ಆರಂಭವಾದ ಬಿಗ್ ಬಾಸ್ ಸದ್ಯ ಸ್ವರ್ಗ ಕಾನ್ಸೆಪ್ಟ್ನಲ್ಲಿ ಮುಂದುವರಿಯುತ್ತಿದೆ. ಸ್ವರ್ಗ ನರಕ ಒಂದಾಗಿದೆ. ಇತ್ತೀಚಿನ ಎಪಿಸೋಡ್ನಲ್ಲಿ ನರಕದ ಜಾಗವನ್ನು ಧ್ವಂಸಗೊಳಿಸಲಾಗಿದೆ.