ಬೆಂಗಳೂರು :ಮುಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಕಾನೂನು ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟ ಪ್ರಾರಂಭವಾದ ಬಳಿಕ ಮುಂದಿನ ಬೆಳವಣಿಗೆ ಏನೆಂಬುದನ್ನು ಗಮನಿಸಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿರ್ಧರಿಸಲಾಗುವುದು ಎಂದರು.
ಹತ್ತಾರು ಪ್ರಕರಣಗಳು ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿವೆ. ಯಾವುದಕ್ಕು ಕೂಡ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಮುಂದಾಗಿಲ್ಲ. ಮುಡಾ ವಿಚಾರದಲ್ಲಿ ತುರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ. ಜುಲೈ 26ರಂದು ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ಮನವಿ ಕೊಡುತ್ತಾರೆ. ಅದೇ ದಿನ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಮುಖ್ಯ ಕಾರ್ಯದರ್ಶಿಯವರು ಹೋಗಿ ಸ್ಪಷ್ಟನೆ ನೀಡಿ ಬಂದಿದ್ದಾರೆ. ಅದೇ ದಿನ ಸಂಜೆ ಸಿಎಂ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ರಾಜ್ಯಪಾಲರು ಹೇಳಬೇಕಲ್ಲವೇ ಎಂದು ಮರುಪ್ರಶ್ನಿಸಿದರು.
ರಾಜ್ಯಪಾಲರು ಸಾಮಾನ್ಯ ರಾಜಕಾರಣಿಯೋ ಅಥವಾ ಅಧಿಕಾರಿಯೋ ಅಲ್ಲ. ಸಂವಿಧಾನದ ಮುಖ್ಯಸ್ಥರು. ಅನೇಕ ಪ್ರಕರಣಗಳು ಅವರ ಕಚೇರಿಯಲ್ಲಿ ಬಾಕಿ ಉಳಿದು, ಯಾವುದಕ್ಕೂ ಗಮನ ಹರಿಸದೇ ಏಕಾಏಕಿ ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡುತ್ತೇವೆ ಎಂದು ಹೇಳಿದರು.
ಬಿಜೆಪಿ ಕಾಲದಲ್ಲಿ ಸಾಕಷ್ಟು ಹಗರಣಗಳಾಗಿವೆ. ತನಿಖೆಗೆ ಆದೇಶ ಮಾಡಿದ್ದೇವೆ. ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಕ್ಯಾಟಿನೆಟ್‌ನಲ್ಲಿ ನಿರ್ಧರಿಸುತ್ತೇವೆ ಎಂದರು. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಅಡ್ವೋಕೇಟ್ ಜನರಲ್‌ಗೆ ತಿಳಿಸಲಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.