ಬೆಂಗಳೂರು:ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಭೂಮಿ ಕೊಡಲು ತೀರ್ಮಾನಿಸಿ, ಅದರಂತೆ ಸರ್ಕಾರಿ ಆದೇಶವನ್ನೂ (2021ರ ಮೇ 6) ಹೊರಡಿಸಿತ್ತು. ಅದೇ ಆದೇಶವನ್ನು ಈಗ ಹೈಕೋರ್ಟ್ ಸೂಚನೆಯಂತೆ (2024ರ ಮಾರ್ಚ್ 12ರಂದು) ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ಆರೋಪವು ನಿರಾಧಾರ. ಹಾಗೊಂದು ವೇಳೆ ಒಳ ಒಪ್ಪಂದ ಆಗಿದ್ದರೆ, ಅದು ಅವರದ್ದೇ ಪಕ್ಷದ ಸರ್ಕಾರದ ಜೊತೆ ಆಗಿರಬೇಕು ಎಂದು ಸಚಿವರು ತಿರುಗೇಟು ನೀಡಿದರು.
ಯಡಿಯೂರಪ್ಪ ಸರ್ಕಾರದ ಆದೇಶ ಜಾರಿಯಾಗದ ಕಾರಣ ಜಿಂದಾಲ್ ಕಂಪನಿ ಹೈಕೋರ್ಟ್ ಮೊರೆ ಹೋಯಿತು. ಬಳಿಕ ಕೋರ್ಟ್ ಆ ಆದೇಶವನ್ನು ಪಾಲಿಸುವಂತೆ ಸೂಚಿಸಿತು. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ. ಇಷ್ಟಕ್ಕೂ ಜಿಂದಾಲ್ ಕಂಪನಿ ರಾಜ್ಯದಲ್ಲಿ ₹90 ಸಾವಿರ ಕೋಟಿ ರೂ. ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರದ ಷರತ್ತುಗಳನ್ನು ಪಾಲಿಸಿದ ನಂತರವೂ ಅವರಿಗೆ ಜಮೀನಿನ ಗುತ್ತಿಗೆ ಮಾರಾಟ ಮಾಡದಿದ್ದರೆ ಹೂಡಿಕೆ ವಲಯಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.