ಬೆಳಗಾವಿ: ಗ್ಯಾರಂಟಿ ಅನ್ನೋ ಶಬ್ದ ಕರ್ನಾಟಕ, ಕಾಂಗ್ರೆಸ್ ನಿಂದ ಬಂದಿದೆ. ಇದೀಗ ಮೋದಿ ಗ್ಯಾರಂಟಿ ಅಂತಿದ್ದಾರೆ, ಇದು ನಮ್ಮ ಗ್ಯಾರಂಟಿಯ ನಕಲು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಚುನಾವಣೆ ವೇಳೆ ಪಂಚ ಗ್ಯಾರಂಟಿಗಳ ಆಶ್ವಾಸನೆ ನೀಡಿ ಅನುಷ್ಠಾನಕ್ಕೆ ತೆಗೆದುಕೊಂಡು ಬಂದಿದ್ದು ಯಶಸ್ವಿಯಾಗಿವೆ. ಗ್ಯಾರಂಟಿ ಅನ್ನೋ ಶಬ್ದ ನಮ್ಮ ಪಕ್ಷದಿಂದ ಮತ್ತು ಕರ್ನಾಟಕದಿಂದ ಬಂದಿದೆ. ಈಗ ಪೋಸ್ಟರ್ಗಳಲ್ಲಿ ಮೋದಿ ಗ್ಯಾರಂಟಿ ಎಂದು ಬರೆಯುತ್ತಿದ್ದಾರೆ, ಇದು ನಮ್ಮ ಗ್ಯಾರಂಟಿಯ ನಕಲು ಎಂದು ಲೇವಡಿ ಮಾಡಿದರು. ಸದ್ಯ ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆ ತಯಾರಿ ಮಾಡುತ್ತಿವೆ. ನಾವು ಕೊಟ್ಟ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದೇವೆ ಎಂದರು.
ಬಳಿಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಸಿಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡೀ ಜಿಲ್ಲೆಯಿಂದ 11 ಜನ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಎಲ್ಲರೂ ನಾಡಿದ್ದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಬರ ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಕೇಂದ್ರ ಬರ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಶಾಸಕ ಲಕ್ಷ್ಮಣ ಸವದಿ ಪಕ್ಷ ಬಿಡ್ತಾರೆ ಎಂಬ ವಿಚಾರಕ್ಕೆ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷಕ್ಕೆ ಬರುವಾಗ ನಾವೇ ಎಲ್ಲ ಪಾತ್ರ ವಹಿಸಿದ್ದೆವು. ಲಕ್ಷ್ಮಣ ಸವದಿ ಪಕ್ಷವನ್ನು ಬಿಡುವುದಿಲ್ಲ ಎಂದರು. ಲೋಕಸಭೆ ಚುನಾವಣೆಗೆ ತಮ್ಮ ಪುತ್ರ ಮೃಣಾಲ್ ಅವರಿಗೆ ಟಿಕೆಟ್ ಸಿಗುತ್ತಾ ಪ್ರಶ್ನೆಗೆ ಉತ್ತರಿಸಿ, ಮೃಣಾಲ್ ಕೂಡ ಒಬ್ಬ ಟಿಕೆಟ್ ಆಕಾಂಕ್ಷಿ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅವರಿಗೆ ಸಹಾಯ ಮಾಡುತ್ತೇವೆ ಮತ್ತು ಅವರನ್ನ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನರ ಅಭಿಮಾನ ರಾಜಕಾರಣಿಗಳಿಗೆ ಬಹಳ ಅವಶ್ಯಕತೆಯಿದೆ. ತಾಯಿಯಾಗಿ, ಅಕ್ಕ, ಆಗಿ ಅನ್ನೋದಕ್ಕಿಂತ ಹೈಕಮಾಂಡ್ ಹೇಳಿದಂತೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ ಎಂದು ಹೇಳಿದರು.
ಫೆ.7ಕ್ಕೆ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ:ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿರುವ ರಾಜ್ಯ ಕಾಂಗ್ರೆಸ್ ನಾಯಕರು, ಫೆ.7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಡಿಸಿಎಂ ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ನಡೆಸಲು ಸ್ಥಳಾವಕಾಶಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ:ರೈತರ ಬೇಡಿಕೆ, ಹಕ್ಕುಗಳ ಮೇಲೆ ರಾಜ್ಯ ಬಜೆಟ್ ಮಂಡಿಸಲಿ: ಸಚಿವ ಸತೀಶ್‌ಗೆ ರೈತ ಸಂಘ ಮನವಿ