ಕರ್ನಾಟಕ

karnataka

ETV Bharat / state

ಕೆರೆಯಂಗಳ ಅತಿಕ್ರಮಣ; ಮರಳಿ ಪಡೆಯಲು ಸರ್ಕಾರದ ತಿಣುಕಾಟ - Lake Encroachment - LAKE ENCROACHMENT

ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ತಾಕೀತು ಮಾಡಿದರೂ ಸರ್ಕಾರಕ್ಕೆ ತೆರವು ಕಾರ್ಯ ಕಬ್ಬಿಣದ ಕಡಲೆಯಾಗಿದೆ. ಒಟ್ಟು 12,235 ಕೆರೆಗಳ ಸರ್ವೆ ಕಾರ್ಯ ಇನ್ನೂ ಬಾಕಿ ಉಳಿದಿದೆ.

ಕೆರೆಗಳ ಅತಿಕ್ರಮಣ ತೆರವು ಕಾರ್ಯ
ಸಂಗ್ರಹ ಚಿತ್ರ (ANI)

By ETV Bharat Karnataka Team

Published : Jul 11, 2024, 7:06 AM IST

ಬೆಂಗಳೂರು: ಕೆರೆಗಳ ಅತಿಕ್ರಮಣ ತೆರವು ಕಾರ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಸಣ್ಣ ನೀರಾವರಿ ಇಲಾಖೆ, ಕೆರೆಯಂಗಳವನ್ನು ಅತಿಕ್ರಮಣಕಾರರ ಕಪಿಮುಷ್ಟಿಯಿಂದ ಮರಳಿ ಪಡೆಯಲು ಹರಸಾಹಸಪಡುತ್ತಿದೆ.

ರಾಜ್ಯದಲ್ಲಿ ಸಾವಿರಾರು ಕೆರೆಗಳಿವೆ. ಆದರೆ ಇವುಗಳ ಪೈಕಿ ಬಹುತೇಕವು ಅತಿಕ್ರಮಣಕಾರರ ಕಪಿಮುಷ್ಟಿಯಲ್ಲಿ ಸಿಲುಕಿವೆ. ಒತ್ತುವರಿ ಕಾರ್ಯ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರದ ಕಿವಿ ಹಿಂಡುತ್ತಿದ್ದರೂ, ತೆರವಿಗೆ ತಿಣುಕಾಡುತ್ತಿದೆ.‌

ಎಲ್ಲ ಕೆರೆಗಳ ಸರ್ವೆ ಕಾರ್ಯವನ್ನು ಪುನರ್‌ ಆರಂಭಿಸುವಂತೆ ಸೂಚಿಸಿರುವ ಹೈಕೋರ್ಟ್, ಯಾವುದೇ ಮುಲಾಜಿಲ್ಲದೇ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಖಡಕ್ ನಿರ್ದೇಶನ ನೀಡಿದೆ. ಆದರೆ ಸರ್ಕಾರಕ್ಕೆ ತೆರವು ಕಾರ್ಯವನ್ನು ನಿರೀಕ್ಷಿತ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಸರ್ವೆ ಕಾರ್ಯ ಕುಂಟುತ್ತಾ ಸಾಗಿದರೆ, ಮತ್ತೊಂದೆಡೆ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗುತ್ತಿದೆ.

12,235 ಕೆರೆಗಳ ಸರ್ವೆ ಕಾರ್ಯ ಬಾಕಿ:ಕೆರೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರದ ನಿರ್ಲಕ್ಷ್ಯ ಮುಂದುವರೆದಿದೆ. ಸಾವಿರಾರು ಕೆರೆಗಳ ಸರ್ವೆ ಕಾರ್ಯ ಇನ್ನೂ ನಡೆದಿಲ್ಲ. ಸಣ್ಣ ನೀರಾವರಿ ಇಲಾಖೆ ನೀಡಿರುವ ಅಂಕಿಅಂಶದಂತೆ ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿವೆ. ಈ ಪೈಕಿ ಇನ್ನೂ 12,235 ಕೆರೆಗಳ ಸರ್ವೆ ಕಾರ್ಯ ಬಾಕಿ ಉಳಿದಿದೆ.

ಯಾಕೀ ವಿಳಂಬ? ಅಧಿಕಾರಗಳು ಹೇಳುವುದೇನು?: ಸರ್ವೆ ಮೂಲಕ ಕೆರೆಗಳ ಜಾಗ ಗುರುತಿಸುವಿಕೆ, ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಬೃಹತ್‌ ನೀರಾವರಿ ಇಲಾಖೆಗಳೂ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಮನ್ವಯತೆಯ ಕೊರತೆ ಈ ವಿಳಂಬಕ್ಕೆ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 28,751 ಕೆರೆಗಳ ಸರ್ವೆ ಮಾಡಿ ಅಳತೆ ಮಾಡಲಾಗಿದೆ.

ಎಲ್ಲಿ, ಎಷ್ಟು ಸರ್ವೇ ಕಾರ್ಯ ಬಾಕಿ?: ಸಣ್ಣ ನೀರಾವರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಹಾಸನದಲ್ಲಿ ಅತಿ ಹೆಚ್ಚು 6,869 ಕೆರೆಗಳಿದ್ದು, ಈ ಪೈಕಿ 3,105 ಕೆರೆಗಳ ಅಳತೆ ಮುಗಿದಿದೆ. ಇನ್ನೂ 3,764 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಶಿವಮೊಗ್ಗದಲ್ಲಿ 4,835 ಕೆರೆಗಳಿದ್ದು, 2,494 ಕೆರೆಗಳ ಅಳತೆ ಕಾರ್ಯ ಇನ್ನೂ ಬಾಕಿ ಉಳಿದುಕೊಂಡಿದೆ. ತುಮಕೂರಿನಲ್ಲಿರುವ ಒಟ್ಟು 2,061 ಕೆರೆಗಳ ಪೈಕಿ 1,054 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಇನ್ನು ಕೋಲಾರದ 2,520 ಕೆರೆಗಳ ಪೈಕಿ 1,557 ಕೆರೆಗಳ ಸರ್ವೆ ಇನ್ನೂ ಬಾಕಿ ಉಳಿದಿದೆ. ಹಾವೇರಿಯ 2,058 ಕೆರೆಗಳ ಪೈಕಿ 1,073 ಕೆರೆಗಳ ಅಳತೆ ಮಾಡಿಸಲು ಸಾಧ್ಯವಾಗಿಲ್ಲ.

ಅಳತೆ ಮಾಡಲಾದ ಒಟ್ಟು 28,751 ಕೆರೆಗಳ ಪೈಕಿ 10,931 ಕೆರೆಗಳಲ್ಲಿ ಒತ್ತುವರಿ ಪತ್ತೆಯಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಹೇಳುತ್ತದೆ. ಈ ಪೈಕಿ ಒತ್ತುವರಿ ತೆರವುಗೊಳಿಸಿದ ಕೆರೆಗಳ ಸಂಖ್ಯೆ 6,065. ಇನ್ನೂ 4,787 ಕೆರೆಗಳ ಒತ್ತುವರಿ ತೆರವಿಗೆ ಮುಹೂರ್ತ ಕೂಡಿ ಬಂದಿಲ್ಲ.

ಪ್ರಮುಖವಾಗಿ, ಹಾಸನ ಜಿಲ್ಲೆಯಲ್ಲಿ ಒತ್ತುವರಿಯೆಂದು ಗುರುತಿಸಿರುವ 1,387 ಕೆರೆಗಳ ಪೈಕಿ 859 ಕೆರೆಗಳ ಒತ್ತುವರಿ ತೆರವಿನ್ನೂ ಬಾಕಿ ಉಳಿದಿದೆ. ರಾಮನಗರದಲ್ಲಿ ಒತ್ತುವರಿ ಗುರುತಿಸಲ್ಪಟ್ಟ 697 ಕೆರೆಗಳಲ್ಲಿ 665 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ. ಚಿಕ್ಕಮಗಳೂರಲ್ಲಿ ಒತ್ತುವರಿ ಗುರುತಿಸಲ್ಪಟ್ಟ 761 ಕೆರೆಗಳ ಪೈಕಿ 607 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ.

ಶಿವಮೊಗ್ಗದಲ್ಲಿ ಒತ್ತುವರಿಗೆ ಗುರುತಿಸಲಾದ 1,045 ಕೆರೆಗಳ ಪೈಕಿ 470 ಕೆರೆಗಳ ಒತ್ತುವರಿ ತೆರವು ಇನ್ನೂ ಬಾಕಿ ಉಳಿದುಕೊಂಡಿದೆ. ಮೈಸೂರಿನಲ್ಲಿ ಒತ್ತುವರಿ ಗುರುತಿಸಲಾದ 1,209 ಕೆರೆಗಳಲ್ಲಿ 391 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ. ತುಮಕೂರಿನಲ್ಲಿ ಒತ್ತುವರಿ ಗುರುತಿಸಲಾದ 483 ಕೆರೆಗಳಲ್ಲಿ 389 ಕೆರೆಗಳ ಒತ್ತುವರಿ ತೆರವು ಬಾಕಿ ಉಳಿದುಕೊಂಡಿದೆ. ಬೆಂಗಳೂರು ನಗರದಲ್ಲಿ ಗುರುತಿಸಲಾದ 733 ಒತ್ತುವರಿ ಕೆರೆಗಳ ಪೈಕಿ 253 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ.

ಇದನ್ನೂ ಓದಿ:ಬೆಳೆ ವಿಮೆ ಯೋಜನೆಯ ಅನುಮಾನ ಬಗೆಹರಿಸುವಂತೆ ಸಚಿವ ಚಲುವರಾಯಸ್ವಾಮಿ ನಿರ್ದೇಶನ - Crop Insurance Scheme

ABOUT THE AUTHOR

...view details