ಬೆಂಗಳೂರು:ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಕಾರ್ಮಿಕರ ಕುರಿತಾದ ನಿರ್ಧಾರಗಳಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರ ಜೀವನ ದುಸ್ಥಿತಿಗೆ ಸಿಲುಕಿದೆ ಎಂದು ಕಾರ್ಮಿಕ ಪರ ಸಂಘಟನೆಗಳ ಪರ ನ್ಯಾಯಾಂಗ ಹೋರಾಟದಲ್ಲಿ ತೊಡಗಿರುವ ವಕೀಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಕಾಯಿದೆಗಳಲ್ಲಿನ ತಿದ್ದುಪಡಿಗಳಿಂದ ದುಡಿಯುವ ಸಮಯ ಹೆಚ್ಚಳವಾಗುತ್ತಿದ್ದು, ವೇತನದಲ್ಲಿ ತೀವ್ರ ಕುಸಿತ ಕಂಡಿದೆ. ಎಲ್ಲ ವಲಯಗಳಲ್ಲಿಯೂ ಗುತ್ತಿಗೆ ಆಧಾರದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತಿದೆ. ಉದ್ಯೋಗ ಕ್ಷೇತ್ರಕ್ಕೆ ಅಭದ್ರತೆ ಕಾಡುವಂತಾಗಿದೆ. ನಿರುದ್ಯೋಗ ಹೆಚ್ಚಳವಾಗುತ್ತಿದ್ದರೂ ಆತ್ಮಹತ್ಯೆಯಂತಹ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೈಕೋರ್ಟ್ ವಕೀಲರಾದ ಮೈತ್ರಿಯಾ ಕೃಷ್ಣನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕೊರೊನಾ ಲಾಕ್‌ಡೌನ್ ಮತ್ತು ನೋಟು ಅಮಾನ್ಯೀಕರಣದಿಂದ ವಲಸೆ ಕಾರ್ಮಿಕರು ಮತ್ತು ದಿನಗೂಲಿಗಳು ಉದ್ಯೋಗಗಳಿಗೆ ಕತ್ತರಿ ಬಿದ್ದಿತ್ತು. ಸರ್ಕಾರಗಳು ಕಾರ್ಪೊರೇಟ್ ಕಂಪೆನಿಗಳ ಪರ ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ ತೀವ್ರ ತೊಂದರೆ ಎದುರಾಗುತ್ತಿದೆ. ಅಲ್ಲದೆ, ಸರ್ಕಾರಿ ಉದ್ಯೋಗಗಳು ಕಡಿಮೆಯಾಗುತ್ತಿರುವುದು ಮತ್ತು ನೇಮಕಾತಿಗಳ ಮೇಲೆ ಅಕ್ಷರಶಃ ನಿರ್ಬಂಧ ಹೇರಲಾಗುತ್ತಿದೆ. ಇದರಿಂದ ಖಾಸಗಿ ಉದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕನಿಷ್ಟ ವೇತನವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಮೇಲೆ ನಿಗದಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಬಗ್ಗೆ ಸಕಾರ್ರಗಳು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿರುವ ಕನಿಷ್ಟ ವೇತನ ಮನೆ ಬಾಡಿಗೆ, ಊಟಕ್ಕೂ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.