ನಾಮಪತ್ರ ಸಲ್ಲಿಸಲು ದಿನಾಂಕ ಘೋಷಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ : ಲೋಕಸಭ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಏಪ್ರಿಲ್ 12 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಘೋಷಿಸಿದ್ದಾರೆ. ಇಂದು ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಏಪ್ರಿಲ್ 12 ರಂದು ಸುಮಾರು 25 ಸಾವಿರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ನನ್ನ ಗುರುತು ಕೂಡ ಇನ್ನೂ ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗದಿಯಾಗಿದೆ. ಆದ್ದರಿಂದ ಏಪ್ರಿಲ್ 12ರಂದು ಸಾವಿರಾರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವೆ. ಈ ರೀತಿ ಘೋಷಿಸಿದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಶಕ್ತಿ ಪ್ರದರ್ಶನಕ್ಕೆ ಇಳಿದಾಗಿದೆ ಎಂದು ಸಮಾವೇಶದಲ್ಲಿ ಕೆ. ಎಸ್ ಈಶ್ವರಪ್ಪ ಘೋಷಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು 108 ಸ್ಥಾನಗಳನ್ನು ನಾವು ಗೆದ್ದಿದ್ದೆವು. ಬಸವರಾಜ ಬೊಮ್ಮಾಯಿ, ಡಿ. ವಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆದರು. ಆದರೆ, ಈ ಬಾರಿ ಬಿಜೆಪಿ 108 ರಿಂದ 66 ಸ್ಥಾನಕ್ಕೆ ಕುಸಿಯಿತು. ಇದಕ್ಕೆ ಕಾರಣ ಕಾರ್ಯಕರ್ತರು ಅಲ್ಲ. ಕೆಲವು ನಮ್ಮ ಪಕ್ಷದ ನಾಯಕರು ಎಂದು ಈಶ್ವರಪ್ಪ ಆರೋಪಿಸಿದರು.
ಶೇ.40 ರಷ್ಟು ಕಮಿಷನ್ ಹಗರಣ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೂ ಕೂಡ ಮಾತಿನಂತೆ ನನಗೆ ಸಚಿವ ಸ್ಥಾನವನ್ನು ಕೊಡಲಿಲ್ಲ. ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದಾದರೆ ನನ್ನ ಮಗ ವಿಜಯೇಂದ್ರನಿಗೂ ಸಚಿವ ಸ್ಥಾನ ನೀಡಬೇಕು ಎಂದಿದ್ದರು ಎಂದು ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಹೇಳದೆ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇನ್ನು ಲೋಕಸಭಾ ಚುನಾವಣೆಗೆ ಮಗನಿಗೆ ಟಿಕೆಟ್ ಕೊಡುತ್ತೇವೆ ಎಂದರು. ಆದರೆ ಕೊಡಲಿಲ್ಲ, ಇದರ ಹಿಂದೆ ಹಿಂದುಳಿದ ನಾಯಕರನ್ನು ಬೆಳೆಸಬಾರದು ಎಂಬ ಹುನ್ನಾರವಿದೆ. ಪ್ರತಾಪ್ ಸಿಂಹ, ಅನಂತ್‍ಕುಮಾರ್ ಹೆಗಡೆ, ಸಿ. ಟಿ. ರವಿ ಮುಂತಾದವರಿಗೂ ಸೀಟು ನಿರಾಕರಿಸಲಾಗಿದೆ. ಈಗಾಗಲೇ ಜಿಲ್ಲಾ ಪ್ರವಾಸ ಮಾಡಿದ್ದೇನೆ. ಬೈಂದೂರಿನಲ್ಲಿ ಸಂಸದ ಬಿ ವೈ ರಾಘವೇಂದ್ರ ಬಗ್ಗೆ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹೋದ ಕಡೆಯೆಲ್ಲ ಅವರಿಗೆ ವಿರೋಧವಾಗುತ್ತಿದೆ. ನನ್ನನ್ನು ಗೆಲ್ಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಗೆದ್ದು ನಿಮ್ಮ ಋಣ ತೀರಿಸುವೆ ಎಂದು ಈಶ್ವರಪ್ಪ ಹೇಳಿದರು.
ಸಚಿವ ಶಿವರಾಜ ತಂಗಡಗಿ ಅಯೋಗ್ಯ :ಇದೇ ವೇಳೆ ಮೋದಿ ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ ಎಂಬ ಹೇಳಿಕೆ ನೀಡಿದ ಸಚಿವ ಶಿವರಾಜ ತಂಗಡಗಿ ಅಯೋಗ್ಯ ಎಂದು ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಶಿವರಾಜ ತಂಗಡಗಿ ಹೇಳಿಕೆಯನ್ನು ಖಂಡಿಸಿದ ಅವರು ನರೇಂದ್ರ ಮೋದಿ ವಿಶ್ವ ನಾಯಕ, ಇಡೀ ದೇಶದ ಜನ ಮೋದಿ ಮೋದಿ ಅಂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಡಗಿಯನ್ನು ಕಿತ್ತು ಬಿಸಾಕಲಿ, ಇಲ್ಲವಾದರೆ ರಾಜ್ಯದ ಜನರೇ ಸಿದ್ದರಾಮಯ್ಯ ಸರ್ಕಾರವನ್ನೇ ಕಿತ್ತು ಬಿಸಾಕುತ್ತಾರೆ ಎಂದರು.
ಇದನ್ನೂ ಓದಿ :ಕಬಿನಿ ಹಿನ್ನೀರಿನ ರೆಸಾರ್ಟ್ನಲ್ಲಿ ಸಿಎಂ ವಾಸ್ತವ್ಯ: ಚುನಾವಣೆ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ - CM siddaramaiah