ಬೆಂಗಳೂರು: ಅಮಿತ್ ಶಾ ಅವರು ಸೂರ್ಯನಿಗೆ ಟಾರ್ಚ್ ಹಿಡಿಯುವ ಸಾಹಸಕ್ಕೆ ಮುಂದಾಗಿದ್ದಾರೆ. ಕರ್ನಾಟಕದವರು ಬರ ಪರಿಹಾರಕ್ಕೆ ಮನವಿ ಸಲ್ಲಿಸಲು ಮೂರು ತಿಂಗಳು ವಿಳಂಬ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 22ರಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಬರಗಾಲ ಮಾನದಂಡದ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬರಗಾಲ ಘೋಷಣೆ ಮಾಡಬೇಕಾದರೆ ಅಕ್ಟೋಬರ್ 31ರವರೆಗೆ ಕಾಯಬೇಕು ಎಂದು ಹೇಳಿದೆ. ಕೇಂದ್ರ ಸರ್ಕಾರದ ಮಾನದಂಡದ ಕೈಪಿಡಿಯಲ್ಲಿರುವಂತೆ ವಿಶೇಷ ಸಂದರ್ಭದಲ್ಲಿ ಮಧ್ಯಭಾಗದಲ್ಲೇ ಘೋಷಿಸಬಹುದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಅಕ್ಟೋಬರ್ 31ರ ಬದಲಾಗಿ ಒಂದೂವರೆ ತಿಂಗಳು ಮೊದಲೇ ಅಂದರೆ ಸೆ.13ರಂದು ರಾಜ್ಯದಲ್ಲಿ ಬರ ಘೋಷಣೆ ಮಾಡಿದೆ ಎಂದು ವಿವರಿಸಿದರು.
ನಾವು ಸೆಪ್ಟೆಂಬರ್ನಲ್ಲಿ ಬರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸಾಕ್ಷಿ ಬೇಕಾದರೆ, ಸೆ.27ರಂದು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗಳು ಬರೆದಿರುವ ಪತ್ರದ ಪ್ರತಿ ನೀಡುತ್ತೇವೆ. ಇದರಲ್ಲಿ ಕೇಂದ್ರದ ಕೃಷಿ ಕಾರ್ಯದರ್ಶಿಗಳು, "ಕೇಂದ್ರ ಸರ್ಕಾರ ಅಂತರ ಇಲಾಖೆಯ ತಂಡವೊಂದನ್ನು ರಚಿಸಿ ಕರ್ನಾಟಕ ರಾಜ್ಯಕ್ಕೆ ಕಳುಹಿಸಿ ಬರ ಅಧ್ಯಯನ ನಡೆಸಲು ಹಾಗೂ ಕೇಂದ್ರದ ಪರಿಹಾರದ ಅಗತ್ಯತೆ ಅರಿಯಲು ತೀರ್ಮಾನಿಸಲಾಗಿದೆ. ನೈರುತ್ಯ ಮಾನ್ಸೂನ್ನಲ್ಲಿ ಕರ್ನಾಟಕ ಮಳೆ ಕೊರತೆ ಎದುರಿಸಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗಿದ್ದು, ಕರ್ನಾಟಕ ಸರ್ಕಾರ 31 ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. 41.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೇ.33ಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಪ್ರಸ್ತಾವನೆ ಸಲ್ಲಿಸಿದೆ. ಆ ಮೂಲಕ ಎನ್ಡಿಆರ್ಎಫ್ ಮೂಲಕ ಬರ ಪರಿಹಾರ ಕೇಳಿದೆ ಎಂದು ತಿಳಿದ್ದಾರೆ.
ಸೆ.27 ರಂದೇ ಕೇಂದ್ರ ಕೃಷಿ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಒಪ್ಪಿಕೊಂಡಿದೆ. ನವೆಂಬರ್ 8ರಂದು ಕೃಷಿ ಸಚಿವಾಲಯದ ಆದೇಶದ ಪತ್ರದಲ್ಲಿ, "ಕೇಂದ್ರ ಸರ್ಕಾರದ ತಂಡ ಕರ್ನಾಟಕಕ್ಕೆ ಭೇಟಿ ಕೊಟ್ಟು ಅಧ್ಯಯನ ನಡೆಸಿರುವ ವರದಿ ಪರಿಶೀಲಿಸಲು ನವೆಂಬರ್ 13ರಂದು ಸಭೆ ಕರೆಯಲಾಗಿದೆ. ನವೆಂಬರ್ 20ರಂದು ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿಗಳು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಇದರಲ್ಲಿ "ಕರ್ನಾಟಕದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ತಂಡ ನೀಡಿರುವ ವರದಿಯ ಶಿಫಾರಸು ಪರಿಶೀಲಿಸಿ, ಅಂತಿಮ ಶಿಫಾರಸನು ಗೃಹ ಸಚಿವರಿಗೆ ಕಳುಹಿಸಿಕೊಟ್ಟು, ಗೃಹ ಸಚಿವರು ಆದಷ್ಟು ಶೀಘ್ರವಾಗಿ ಉನ್ನತ ಮಟ್ಟದ ಸಭೆ ಕರೆದು ಕರ್ನಾಟಕ ರಾಜ್ಯಕ್ಕೆ ಎನ್ಡಿಆರ್ಎಫ್ ಮೂಲಕ ಶಿಫಾರಸು ನೀಡಬೇಕು ಎಂದು ಪತ್ರ ಬರೆಯಲಾಗಿದೆ" ಎಂದು ತಿಳಿಸಲಾಗಿದೆ. ಇದರೊಂದಿಗೆ ಗೃಹ ಸಚಿವರಿಗೆ ರಾಜ್ಯ ಬರ ಪರಿಹಾರದ ಅಂತಿಮ ಶಿಫಾರಸು ಪತ್ರ ನವೆಂಬರ್ 20ಕ್ಕೆ ತಲುಪಿದೆ.