ವಿಜಯಪುರ: ರೈತರು ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ನೀರಿನ ಸದ್ಭಳಕೆಯೊಂದಿಗೆ ಉತ್ತಮ ಇಳುವರಿ ಪಡೆದು ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಸಲಹೆ ನೀಡಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ, ವಿಜಯಪುರದ ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ವಿಜಯಪುರದ ಹಿಟ್ಟಿನಹಳ್ಳಿ ಫಾರ್ಮ್ನಲ್ಲಿ ಆಯೋಜಿಸಿದ ಕೃಷಿ ಮೇಳ 2023-24ರ ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಇಸ್ರೇಲ್ ಕೃಷಿ ಮಾದರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಸಾವಯವ ಕೃಷಿಗೆ ಒತ್ತು ನೀಡಿ ಹೊಸ-ಹೊಸ ತಂತ್ರಜ್ಞಾನ ಉಪಯೋಗಿಸಿಕೊಳ್ಳಬೇಕು. ಕೃಷಿಗೆ ಉತ್ತೇಜನ ನೀಡುವತ್ತ ಸರ್ಕಾರವೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಂತಹ ಕೃಷಿ ಮೇಳವು ರೈತರಿಗೆ ಸಹಾಯಕವಾಗಲಿದೆ. ರೈತರು ತಮ್ಮ ಜಮೀನಿನ ಬದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳನ್ನು ಬೆಳೆಸುವುದರಿಂದ ವಾತಾವರಣವೂ ಶುದ್ಧೀಕರಣಗೊಂಡು ಮಳೆಯಾಗಲು ಸಹಕರಿಸುತ್ತದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಉದ್ಯಮವಾಗಿ ಬೆಳೆಯಬೇಕು. ಇದಕ್ಕೆ ಪೂರಕವಾಗಿ ಕೃಷಿ ವಿಜ್ಞಾನಿಗಳು ನೆರವಾಗುತ್ತಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಿ. ವ್ಯವಸಾಯದೊಂದಿಗೆ ಉಪ ಕಸುಬುಗಳಿಗೆ ಒತ್ತು ನೀಡಿ. ಈ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಪಾಟೀಲ, ಒಣಬೇಸಾಯ ಸಂಶೋಧನಾ ಕೇಂದ್ರವಾದ ಹಿಟ್ಟಿನಹಳ್ಳಿಯು ಉತ್ತಮ ದರ್ಜೆಯ ಸಂಶೋಧನೆಗಳನ್ನು ಮಾಡಿದೆ. ರೈತರಿಗೆ ಒಣ ಬೇಸಾಯದ ಅಗತ್ಯ ಮಾಹಿತಿ ಹಾಗೂ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲಾಗುತ್ತಿದೆ ಎಂದರು.
ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾಧಿಕಾರಿ ಡಾ.ಎ.ಭೀಮಪ್ಪ, ಶ್ರೀನಿವಾಸ ಕೋಟ್ಯಾನ, ಧಾರವಾಡ ಕೃಷಿ ವಿದ್ಯಾಧಿಕಾರಿಗಳಾದ ಡಾ.ಎಚ್.ಬಿ.ಬಬಲಾದ, ಧಾರವಾಡ ಕೃಷಿ ಸಂಶೋಧನ ನಿರ್ದೇಶಕ ಡಾ.ಬಿ.ಡಿ ಬಿರಾದಾರ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಸ್.ಅಂಗಡಿ, ಪ್ರಾದೇಶಿಕ ಕೃಷಿ ಸಂಶೋಧನ ನಿರ್ದೇಶಕ ಡಾ.ಅಶೋಕ ಎಸ್. ಸಜ್ಜನ, ವಿಜಯಪುರ ಕೃಷಿ ವಿಸ್ತರಣ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ವಿಜಯಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಡಿ.ಡಬ್ಲೂ.ವಿಲಿಯಮ್ ರಾಜಶೇಖರ, ಹಿಟ್ಟಿನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿಕುಮಾರ ಸಾಬು ಕಡಿಮನಿ ಉಪಸ್ಥಿತರಿದ್ದರು.
ಎತ್ತಿನಬಂಡಿ ಜಾಥಾ: ಕೃಷಿ ಮೇಳ ಕಾರ್ಯಕ್ರಮದ ಅಂಗವಾಗಿ 20 ಎತ್ತಿನ ಬಂಡಿ ಜಾಥಾ ನಡೆಯಿತು. ಜಾಥಾಕ್ಕೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿದರು. ನಗರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಸರ್ಕಲ್, ಬಸ್ ಸ್ಟ್ಯಾಂಡ್, ಬಾಗಲಕೋಟ ಕ್ರಾಸ್, ಜಲನಗರ, ಇಬ್ರಾಹಿಂಪೂರ್ ಮಾರ್ಗವಾಗಿ ಕೃಷಿ ಮೇಳ ನಡೆಯುವ ಹಿಟ್ಟಿನಹಳ್ಳಿ ಫಾರ್ಮ್‌ಗೆ ಬೆಳಿಗ್ಗೆ 10.30 ಗಂಟೆಗೆ ಜಾಥಾ ತಲುಪಿತು.
ಫಲಪುಷ್ಪ ಪ್ರದರ್ಶನ: ಕೃಷಿಮೇಳದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ತರಕಾರಿಗಳಿಂದ ರಚಿಸಿದ ರಂಗೋಲಿ ಜನರ ಗಮನ ಸೆಳೆಯಿತು. ವಿವಿಧ ಹೂಗಳ ಗುಚ್ಚಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಬೋನ್ಸಾಯ್ ಮರಗಳು ಹಾಗೂ ಔಷಧೀಯ ಸಸಿಗಳು ಕಂಡುಬಂದವು.
ಕೃಷಿ ಮೇಳದ ವಿಶೇಷತೆಗಳು: ಈ ಸಲದ ಕೃಷಿಮೇಳದಲ್ಲಿ ರೈತರಿಗಾಗಿ ಕೃಷಿ ವಸ್ತುಗಳ ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿತ್ತು. ಅದರಲ್ಲೂ ಪ್ರಮುಖವಾಗಿ ಕೃಷಿ ಪರಿಕರ ಮಾರಾಟ ಮಳಿಗೆ, ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಳಿಗೆ, ವಿವಿಧ ಸಂಶೋಧನಾ ಕೇಂದ್ರಗಳ ಮಳಿಗೆ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆಯ ಏರ್ಪಾಡು ಮಾಡಿದೆ. ಕೃಷಿ ಸಲಹಾ ಕೇಂದ್ರದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಲಭ್ಯವಿದ್ದು, ಮೇಳಕ್ಕೆ ಬರುವ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಮಧ್ಯಾಹ್ನ ವಿವಿಧ ವಿಷಯ ತಜ್ಞರಿಂದ ಹಾಗೂ ಅನುಭವಿ ರೈತರಿಂದ ವಿವಿಧ ವಿಷಯಗಳ ಮೇಲೆ ಕೃಷಿಗೋಷ್ಠಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮಗಳು ಜರುಗಲಿವೆ.
ಇದನ್ನೂ ಓದಿ:ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ