ಕರ್ನಾಟಕ

karnataka

ETV Bharat / state

ಜನರಿಗೆ ತಪ್ಪು ಸಂದೇಶ ನೀಡಲು ಬಜೆಟ್ ಅಧಿವೇಶನ ಬಳಸಿಕೊಂಡ ಸಿಎಂ: ಕೋಟ ಶ್ರೀನಿವಾಸ ಪೂಜಾರಿ - ಸಿದ್ದರಾಮಯ್ಯ

ಬಜೆಟ್‌ ಅಧಿವೇಶನದ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಾಪ್ರಹಾರ ನಡೆಸಿದರು.

Kota Srinivasa Pujari spoke at the press conference.
ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Mar 1, 2024, 5:35 PM IST

ಬೆಂಗಳೂರು:ಈ ಬಾರಿಯ ರಾಜ್ಯಪಾಲರ ಭಾಷಣ ಮತ್ತು ಸಂಪೂರ್ಣ ಬಜೆಟ್ ಅಧಿವೇಶನವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ತಪ್ಪು ಸಂದೇಶ ನೀಡಲು ಮತ್ತು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ಕನಿಷ್ಠ 48 ಗಂಟೆ ದಾಟಿ ಈಗ 60 ಗಂಟೆ ಆಗಿದ್ದರೂ ಕೂಡ ಅಧಿಕೃತವಾಗಿ ಆರೋಪಿ ಬಂಧನದ ಬಗ್ಗೆ ಸರಕಾರ ಒಂದೂ ಮಾಹಿತಿ ಕೊಟ್ಟಿಲ್ಲ. ಅದರ ಬದಲಾಗಿ ಆ ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲ ಕೊಡುವ ಎಲ್ಲ ಕೆಲಸಗಳನ್ನು ಸಿದ್ದರಾಮಯ್ಯ, ಗೃಹಸಚಿವರು ಮತ್ತು ಇಡೀ ಸಚಿವ ಸಂಪುಟ ಮಾಡುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರವಿರೋಧಿ ಕೃತ್ಯಗಳ ಕುರಿತು ನಿಮ್ಮ ಕ್ರಮವೇನು ಎಂದು ಪ್ರಶ್ನಿಸಿದರೆ, ದೇಶ ಮೊದಲು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರೆ, ಪಾಕಿಸ್ತಾನ ನಮ್ಮ ನೆರೆ ರಾಷ್ಟ್ರ. ಶತ್ರು ರಾಷ್ಟ್ರವಲ್ಲ ಎನ್ನುತ್ತಾರೆ ಎಂದರು.

ಪಾಕಿಸ್ತಾನ ನಮ್ಮ ನೆರೆರಾಷ್ಟ್ರ ಹೌದು. ಆದರೆ ಇಲ್ಲಿಯವರೆಗೆ ಭಯೋತ್ಪಾದನೆಯನ್ನು ಬೆಂಬಲಿಸಿ ನಮ್ಮ ರಾಷ್ಟ್ರದ ಒಟ್ಟು ಅಭಿವೃದ್ಧಿಯನ್ನು ಮತ್ತು ದೇಶದ ಕಾನೂನು-ಸುವ್ಯವಸ್ಥೆಯನ್ನು ಹಾಳು ಮಾಡುವ ಹಾಗೂ ರಾಷ್ಟ್ರಭಕ್ತರನ್ನು ಹತ್ಯೆ ಮಾಡುವ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದನ್ನು, ಪಾಕ್ ಪರ ಘೋಷಣೆ ಕೂಗಿರುವವರನ್ನು ರಕ್ಷಿಸುವ ಸಿದ್ದರಾಮಯ್ಯನವರ ಸರಕಾರದ ಕ್ರಮವನ್ನು ಖಂಡಿಸಿದ್ದೇವೆ.

ಇದರ ವಿರುದ್ಧ ರಾಜ್ಯಪಾಲರ ಬಳಿ ತೆರಳಿ ನಿನ್ನೆ ದೂರು ಕೊಟ್ಟಿದ್ದೇವೆ. ರಾಜ್ಯಪಾಲರು ಬಹಳ ಸಹಾನುಭೂತಿಯಿಂದ ಮಾತುಗಳನ್ನು ಕೇಳಿದ್ದಾರೆ. ವಿಧಾನಸೌಧದಲ್ಲೇ ಭಾರತ ವಿರೋಧಿ ಘೋಷಣೆ ಕೂಗಿದ್ದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುವುದಾಗಿ ವಿಶ್ವಾಸದ ಮಾತನ್ನಾಡಿದ್ದು ನಮಗೆ ತೃಪ್ತಿ ತಂದಿದೆ ಎಂದು ವಿವರಿಸಿದರು.

ಮಾಧ್ಯಮದವರಿಗೆ ಬೆದರಿಕೆ: ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸರಕಾರದ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಅಷ್ಟಾದರೂ ಬಂಧನ ನಡೆದಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಗೆಲುವನ್ನು ಕಂಡ ನಾಸಿನ್ ಹುಸೇನ್ ಎಂಬ ಸದಸ್ಯರು ಮಾಧ್ಯಮದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಾಗಲೂ ಕೂಡ ಸರಕಾರ ನಿಷ್ಕ್ರಿಯವಾಗಿತ್ತು. ಇದನ್ನು ನೋಡಿದರೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆ ಪತ್ರಿಕಾರಂಗವನ್ನು ಕೂಡ ದಬ್ಬಾಳಿಕೆ ಮೂಲಕ ಪ್ರತಿಬಂಧಿಸುವ, ತುರ್ತು ಪರಿಸ್ಥಿತಿಯ ಆಡಳಿತ ಮತ್ತೊಮ್ಮೆ ಕರ್ನಾಟಕದಲ್ಲಿ ಬರುವ ವಾತಾವರಣ ನಿರ್ಮಾಣವಾಗಿದೆ ಎಂದರು.

ಇದನ್ನೂಓದಿ:ಬಿಬಿಎಂಪಿ ಬಜೆಟ್​ನಲ್ಲಿ 'ಬ್ರ್ಯಾಂಡ್ ಬೆಂಗಳೂರಿಗೆ' ಸಿಂಹಪಾಲು: ಯಾವುದಕ್ಕೆ ಎಷ್ಟು ಅನುದಾನ?

ABOUT THE AUTHOR

...view details