ಕಾರವಾರ:ಅಂಕೋಲಾದ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾದೀನಗೊಳಕ್ಕೊಳಗಾದ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ನಿವೇಶನ ಹಂಚಿಕೆಗೆ ಗುರುತಿಸಿರುವ ಜಾಗಕ್ಕೆ ಬಹುತೇಕ ನಿರಾಶ್ರಿತರು ಸಹಮತ ಸೂಚಿಸಿದ್ದಾರೆ. ಆದರೆ, ಅಗತ್ಯ ಮೂಲ ಸೌಕರ್ಯ ಸಂಪೂರ್ಣ ಕಲ್ಪಿಸಿದ ಬಳಿಕವೇ ಈಗಿರುವ ಮನೆ ಜಮೀನು ತೊರೆಯುವುದಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಪರ ಜಿಲ್ಲಾಧಿಕಾರಿ ಸಾಜಿದ್ಮುಲ್ಲಾ ಅವರ ಸಮ್ಮುಖದಲ್ಲಿ ನಿರಾಶ್ರಿತ ಕುಟುಂಬಗಳೊಂದಿಗೆ ಸಭೆ ನಡೆಯಿತು. ಈ ವೇಳೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ, ''ವಿಮಾನ ನಿಲ್ದಾಣ ಸಂಬಂಧ ಈಗಾಗಲೇ 87 ಎಕರೆ ಜಮೀನು ಭೂಸ್ವಾದೀನ ಪ್ರಕ್ರಿಯೆಗೆ ಒಳಪಟ್ಟಿದ್ದು, ಇದಕ್ಕೆ ಪರಿಹಾರ ಕೂಡ ಬಿಡುಗಡೆಯಾಗಿದೆ'' ಎಂದರು.
60*90 ನಿವೇಶನ: ''ಹೆಚ್ಚುವರಿಯಾಗಿ ಮತ್ತೆ 6 ಎಕರೆ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದ್ದು, ಇದು ಸರ್ಕಾರದ ಮಟ್ಟದಲ್ಲಿ ಅಂತಿಮ ಹಂತದಲ್ಲಿದೆ. ಇದರ ಸರ್ವೇ ಕಾರ್ಯ ನಡೆಸಿ, ಭೂಮಿ ಕಳೆದುಕ್ಕೊಳ್ಳುವವರಿಗೆ ಸದ್ಯದಲ್ಲಿಯೇ ಪರಿಹಾರ ವಿತರಿಸುವ ಕಾರ್ಯ ನಡೆಸಲಾಗುವುದು. ಇದೀಗ ಈ ಕುಟುಂಬಗಳಿಗೆ ಪುನರ್‌ವಸತಿಗೆ ಅಂಕೋಲಾದ ಬೋರ್ಗಿಬೈಲ್, ಕವಲಳ್ಳಿ, ಹೊಸಗದ್ದೆ, ಬೆಳಸೆ ಸೇರಿ ನಾಲ್ಕು ಕಡೆ ಜಾಗ ಗುರುತಿಸಿದ್ದು, 60*90 ನಿವೇಶನಗಳನ್ನು ನೀಡಲು ನಿರ್ಧರಿಸಲಾಗಿದೆ'' ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಭೂಸ್ವಾದೀನಕ್ಕೆ ಒಳಪಡುತ್ತಿರುವವರು ತಮ್ಮ ಸಮುದಾಯಗಳಿಗೆ ಒಂದೇ ಕಡೆ ಜಾಗ ನೀಡಬೇಕು ಎಂದು ಸಭೆಯ ಆರಂಭದಲ್ಲಿಯೇ ಒತ್ತಾಯಿಸಿದರು. ಬೋರ್ಗಿಬೈಲ್ ಬಳಿ 11 ಸೈಟ್ ಇರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಅದರಂತೆ ಹರಿಜನ ಸಮುದಾಯ 11 ಕುಟುಂಬಗಳಿಗೆ ಅಲ್ಲಿ ಜಾಗ ನೀಡಿ ಉಳಿದವರಿಗೆ ಬೇರೆಡೆ ನೀಡುವುದಾಗಿ ತಿಳಿಸಿದರು. ಆದರೆ, ಹರಿಜನ ಸಮಾಜದ 22 ಕುಟುಂಬದವರೂ ಒಂದೇ ಕಡೆ ವಾಸ ಮಾಡುವುದಾಗಿ ಪಟ್ಟು ಹಿಡಿದ ಕಾರಣ ಈಗಾಗಲೇ ಗುರುತಿಸಿದ ಜಾಗದ ಸರ್ವೇ ನಂ.4ರಲ್ಲಿ ಹೆಚ್ಚುವರಿ ಜಾಗ ಪಡೆದು ಒಟ್ಟು 4 ಎಕರೆ 25 ಗುಂಟೆ ಜಾಗದಲ್ಲಿ ಪುನಃ ಸರ್ವೇ ಮಾಡಿ ಲೇಔಟ್ ಮಾಡಿ, ನಿವೇಶನ ನೀಡಲು ತೀರ್ಮಾನಿಸಲಾಯಿತು. ಇದಕ್ಕೆ ಹರಿಜನ ಸಮುದಾಯದವರು ಒಪ್ಪಿಗೆ ಸೂಚಿಸಿ ಸಹಿ ಹಾಕಿದರು.
ಆಚಾರಿ ಸಮುದಾಯ ಹಾಗೂ ದೈವಜ್ಞ ಬ್ರಾಹ್ಮಣರ ಕುಟುಂಬಗಳು ಕೂಡ ಒಂದೇ ಕಡೆ ಜಾಗ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯ ಲಭ್ಯವಿರುವ ಜಾಗದಲ್ಲಿ ಒಂದೇ ಕಡೆ ನೀಡಲು ಸಾಧ್ಯವಿಲ್ಲ. ಮೊದಲು 18 ಕುಟುಂಬಗಳಿಗೆ ಚೀಟಿ ಮೂಲಕ ನೀಡಿ, ಉಳಿದಂತವರಿಗೆ ಬೆಳಸೆ ಗ್ರಾಮದಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಯಿತು. ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಶಾಸಕ ಸತೀಶ್ ಸೈಲ್ ಕೋರಿದರು.
ಆದರೆ ದೈವಜ್ಞ ಬ್ರಾಹ್ಮಣ ಸಮುದಾಯದವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹೆಚ್ಚುವರಿ ಜಾಗ ಪಡೆದು ತಮಗೆ ಎಲ್ಲ ಸಮುದಾಯದವರಿಗೂ ಒಂದೇ ಕಡೆ ಜಮೀನು ಮಂಜೂರಿಸುವಂತೆ ಒತ್ತಾಯಿಸಿದರು. ಇದಕ್ಕೆ ಶಾಸಕರು ಜಾಗದ ಲಭ್ಯತೆ ಇರುವ ಬಗ್ಗೆ ತಿಳಿಸಿದ್ದಲ್ಲಿ, ತಮಗೆ ಅಲ್ಲಿಯೇ ಜಾಗ ನೀಡುವ ಬಗ್ಗೆ ಭರವಸೆ ನೀಡಿದರು.
ಬಳಿಕ ಶಾಸಕ ಸತೀಶ್ ಸೈಲ್ ಮಾತನಾಡಿ, ''ಕಳೆದ 5 ವರ್ಷಗಳಿಂದ ಈ ಪ್ರಕ್ರಿಯೇ ನೆನೆಗುದಿಗೆ ಬಿದ್ದಿತ್ತು. ಒಂದೇ ಯೋಜನೆಗೆ ಭೂಮಿ ಕಳೆದುಕ್ಕೊಳ್ಳುತ್ತಿದ್ದರೂ ಪರಿಹಾರ ಮಾತ್ರ ಒಬ್ಬೊಬ್ಬರಿಗೆ ಒಂದೊಂದು ರೀತಿ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಸಭೆ ನಡೆಸಿದಾಗ ಅವಾರ್ಡ್ ಆಗುವ ಜಾಗದಲ್ಲಿ ಹೆಚ್ಚಿನ ಪರಿಹಾರ ಸಿಗುವ ಪ್ರದೇಶದ ದರವನ್ನೇ ಇತರ ಭೂ ಸಂತ್ರಸ್ತರಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಅಲ್ಲದೇ 30*40 ನಿವೇಶನದಲ್ಲಿ ಕೊಟ್ಟಿಗೆ ಇನ್ನಿತರ ಕಾರ್ಯಗಳಿಗೆ ಬಳಕೆ ಸಾಧ್ಯವಿಲ್ಲದ ಬಗ್ಗೆ ತಿಳಿಸಿದಾಗ ನಮ್ಮ ಸರ್ಕಾರ ಹೆಚ್ಚುವರಿಯಾಗಿ 60*90 ನಿವೇಶನ ನೀಡಲು ಒಪ್ಪಿಗೆ ಸೂಚಿಸಿದೆ'' ಎಂದು ತಿಳಿಸಿದರು.
''ಅದರಂತೆ ಇದೀಗ ನಿರಾಶ್ರಿತರ ಕುಟುಂಬಗಳಿಗೆ ಹಂಚಿಕೆ ಮಾಡಲು ಸಿಎಂ ಸೂಚಿಸಿದ್ದಾರೆ. ಅಲ್ಲದೇ, ಇದೀಗ ಹೆಚ್ಚುವರಿ 11 ಕೋಟಿ ರೂ. ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು ಸಹ ಕೂಡಲೇ ನಿರಾಶ್ರಿತರಿಗೆ ಹಂಚಿಕೆ ಮಾಡಲಾಗುವುದು. ಆಯಾ ಸಮುದಾಯದವರು ಪ್ರತ್ಯೆಕವಾಗಿಯೇ ಜಾಗ ನೀಡುವಂತೆ ಕೋರಿದ್ದರು. ಅದರಂತೆ ಹಂಚಿಕೆ ಮಾಡಿದ್ದೇವೆ. ಆದರೆ, 8 ನಿವೇಶನಗಳ ಕೊರತೆಯಾದ ಕಾರಣ ಆಚಾರಿ ಸಮುದಾಯ ಹಾಗೂ ದೈವಜ್ಞ ಬ್ರಾಹ್ಮಣರ ಕುಟುಂಬಗಳಿಗೆ ಹೊಸಗದ್ದೆ ಹಾಗೂ ಕಲವಳ್ಳಿಯಲ್ಲಿ ಮೊದಲು 18 ನಿವೇಶನಗಳನ್ನು ಹಂಚಿಕೆ ಮಾಡಿ, ಉಳಿದ 8 ಕುಟುಂಬಗಳಿಗೆ ಬೆಳಸೆಯಲ್ಲಿ ಜಾಗ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಆದರೆ ಇದಕ್ಕೆ ದೈವಜ್ಞ ಬ್ರಾಹ್ಮಣ ಸಮುದಾಯದವರು ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ'' ಎಂದರು.
ಮರುಪರಿಶೀಲನೆಗೆ ಸೂಚನೆ:ನಾಗರಿಕ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 6 ಎಕರೆ ಭೂಸ್ವಾದೀನಪಡಿಸಿಕ್ಕೊಳ್ಳಲು ನೋಟಿಫಿಕೇಶನ್ ಹೊರಡಿಸಲಾಗಿದೆ. ಈಗಾಗಲೇ ಸರ್ವೇ ಕಾರ್ಯ ನಡೆಸಿದರೂ ಕೂಡ ಕೆಲ ಕುಟುಂಬದವರ ಮನೆ ಜಮೀನು, ಮರಗಳ ಬಗ್ಗೆ ಸರಿಯಾದ ಲೆಕ್ಕ ಹಾಕದ ಬಗ್ಗೆ ನಿರಾಶ್ರಿತರು ದೂರಿದರು. ಈ ವೇಳೆ ಶಾಸಕ ಸತೀಶ್ ಸೈಲ್, ''ಈ ಪ್ರದೇಶ ವ್ಯಾಪ್ತಿಯ ಕುಟುಂಬದವರು ತಮ್ಮ ಜಮೀನು ವ್ಯಾಪ್ತಿ ಹಾಗೂ ಅಲ್ಲಿರುವ ಮರಗಿಡ ಸೇರಿದಂತೆ ಇತರ ವಸ್ತುಗಳ ಲೆಕ್ಕಹಾಕಿ ತಹಶೀಲ್ದಾರ್ ಕಚೇರಿಗೆ ನೀಡಿದ್ದಲ್ಲಿ, ಈ ಬಗ್ಗೆ ಪರಿಗಣಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಎರಡು ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ'' ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೀಟಿ ತೆಗೆದು ಹಂಚಿಕೆಗೆ ನಿರ್ಧಾರ:ಭೂಸ್ವಾದೀನ ಪ್ರಕ್ರಿಯೆಯಲ್ಲಿ ನಿರಾಶ್ರಿತರಾಗುತ್ತಿರುವ ಕುಟುಂಬಗಳಿಗೆ ಈಗಾಗಲೇ ಗುರುತಿಸಲಾದ ಜಾಗದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಆದರೆ, ಯಾರಿಗೆ ಯಾವ ನಿವೇಶನ ನೀಡಬೇಕು ಎಂಬ ಗೊಂದಲ ಬಗೆಹರಿಸುವ ಸಂಬಂಧ ಆಯಾ ಜಾಗ ಪ್ರತಿ ನಿವೇಶನಗಳಿಗೆ ನಂಬರ್ ನೀಡಿ, ಚೀಟಿ ಮಾಡಿ ಆಯಾ ಕುಟುಂಬದ ಸದಸ್ಯರ ಮೂಲಕ ಎತ್ತಿಸಲಾಗುವುದು. ಯಾರಿಗೆ ಯಾವ ನಂಬರ್ ನಿವೇಶನ ಬಂದಿದೆಯೋ ಅದನ್ನು ಪಡೆಯಬೇಕು. ಒಂದೊಮ್ಮೆ ನಿಮ್ಮಲ್ಲಿಯೇ ಬದಲಿಸಿಕ್ಕೊಳ್ಳುವುದಾದರೆ ಅದಕ್ಕೆ ಅಲ್ಲಿ ಅವಕಾಶ ಕಲ್ಪಿಸಲಾಗುವುದು'' ಎಂದು ಸೈಲ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಭೂಸ್ವಾದೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕ್ಕೊಂಡಿರುವವರು, ''ನಾವು ಈಗಾಗಲೇ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದೇವೆ. ನಮಗೆ ಸೂಕ್ತ ಪರಿಹಾರದ ಜೊತೆಗೆ ಉದ್ಯೋಗಾವಕಾಶ ನೀಡಬೇಕು. ಅಲ್ಲದೇ, ಈ ಸಭೆಯಲ್ಲಿ ನಾವು ಕೇಳಿದಲ್ಲಿಯೇ ನಮಗೆ ಜಾಗ ನೀಡಿದ್ದಾರೆ. ನಾವು ಇದನ್ನು ಒಪ್ಪಿಕ್ಕೊಂಡಿದ್ದೇವೆ. ಆದರೆ, ಮೊದಲು ಈ ಜಾಗದಲ್ಲಿ ನಮಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲಿವರೆಗೂ ನಾವು ಈಗಿರುವ ಜಾಗವನ್ನು ಬಿಟ್ಟು ತೆರಳುವುದಿಲ್ಲ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೂ ತಿಳಿಸಲಾಗಿದೆ'' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮೈಕ್ರೋ ಫೈನಾನ್ಸ್ನಿಂದ ಮನೆಗೆ ಬೀಗ: ಬಾಣಂತಿ ಮನೆಗೆ ವಾಪಸ್ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯಕ್ಕೆ ಕುಟುಂಬದಿಂದ ಧನ್ಯವಾದ