ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್‌: ಲೋಕ ಸಮರದ ಹೊಸ್ತಿಲಲ್ಲಿ ರಾಜ್ಯಕ್ಕೆ ಸಿಗುವುದೇ ಭರಪೂರ ಕೊಡುಗೆ?

ನಾಳೆ ಕೇಂದ್ರ ಬಜೆಟ್​​ ಮಂಡನೆಯಾಗಲಿದ್ದು ಕರ್ನಾಟಕ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

Central Budget on February 1st
ಫೆಬ್ರವರಿ 1 ಕ್ಕೆ ಕೇಂದ್ರ ಬಜೆಟ್​​

By ETV Bharat Karnataka Team

Published : Jan 31, 2024, 7:18 AM IST

ಬೆಂಗಳೂರು:ಕೇಂದ್ರ ಸರ್ಕಾರ ಫೆಬ್ರುವರಿ 1ರಂದು ಬಜೆಟ್​​ ಮಂಡಿಸಲಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಇದಾಗಿದ್ದು, ಕರ್ನಾಟಕ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಸಂಸತ್ ಭವನದಲ್ಲಿ ಬಜೆಟ್​ ಮಂಡನೆ ಮಾಡಲಿದ್ದಾರೆ.

ಕರ್ನಾಟಕದ ದೀರ್ಘಕಾಲದ ಯೋಜನೆಗಳಿಗೆ ಅನುದಾನ ಸಿಗುವ ಸಾಧ್ಯತೆ ಇದೆ. ನೀರಾವರಿ ಯೋಜನೆಗಳು, ಹೊಸ ಹೆದ್ದಾರಿ ಯೋಜನೆಗಳು, ಮೆಟ್ರೋ ಮಾರ್ಗ ವಿಸ್ತರಣೆ ಸಂಬಂಧ ಕೆಲ ಬೇಡಿಕೆಗಳನ್ನು ರಾಜ್ಯವು ಕೇಂದ್ರದ ಮುಂದಿಟ್ಟಿದೆ.

ಬೇಡಿಕೆಗಳು:ಸಿಎಂ ಸಿದ್ದರಾಮಯ್ಯ ಫೆ.16ಕ್ಕೆ ರಾಜ್ಯ ಬಜೆಟ್​ ಮಂಡನೆ ಮಾಡಲಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ 5,495 ಕೋಟಿ ರೂ. ವಿಶೇಷ ಸಹಾಯನುದಾನ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಆ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ಹೆಚ್ಚು ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ ಎಂಬುದು ರಾಜ್ಯ ಸರ್ಕಾರದ ಬೇಡಿಕೆ.

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೇಂದ್ರದ ಮುಂದೆ ಮನವಿ ಮಾಡಲಾಗಿದೆ. ಆ ಮೂಲಕ ಯೋಜನಾ ವೆಚ್ಚದ ಶೇ.80 ಅನುದಾನ ಕೇಂದ್ರ ಸರ್ಕಾರ ಭರಿಸಲಿದೆ. ಇದರ ಜೊತೆಗೆ ನೀರಾವರಿ ಯೋಜನೆಗಳಾದ ಮೇಕೆದಾಟು, ಎತ್ತಿನ‌ಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಉಳಿದಂತೆ, ರೈಲ್ವೇ ಯೋಜನೆ, ಹೊಸ ರೈಲುಗಳನ್ನು ನೀಡುವಂತೆ ಹಾಗೆಯೇ ಕೇಂದ್ರ ಬಜೆಟ್​​ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹೆಚ್ಚಿನ ಅನುದಾನ ಹಾಗೂ ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು, ಕೇಂದ್ರದ ಸಹಾಯಾನುದಾನ ಹೆಚ್ಚಿಸುವ ಬೇಡಿಕೆ ಇಡಲಾಗಿದೆ.

ಹೊಸ ಹೆದ್ದಾರಿ ಯೋಜನೆಗಳತ್ತ ಚಿತ್ತ:ರಾಜ್ಯ ಸರ್ಕಾರ ಹೊಸ ಹೆದ್ದಾರಿ ಯೋಜನೆ ಘೋಷಣೆಗಳತ್ತ ಕಣ್ಣಿಟ್ಟಿದೆ. ಗುಂಡ್ಲುಪೇಟೆ, ನಂಜನಗೂಡು ಮತ್ತು ಮೈಸೂರು ಮೂಲಕ ಕೊಳ್ಳೇಗಾಲ-ಕೇರಳ ಸಂರ್ಕಿಸುವ ಎನ್​ಹೆಚ್​ -766 ರಸ್ತೆ ಅಗಲೀಕರಣ ಯೋಜನೆಯ ನಿರೀಕ್ಷೆಯಲ್ಲಿದೆ. ಅದೇ ರೀತಿ ಮಳವಳ್ಳಿ ಮತ್ತು ಕೊಳ್ಳೆಗಾಲ ಮೂಲಕ ಕರ್ನಾಟಕದ ಕನಕಪುರ-ತಮಿಳುನಾಡು ಸಂಪರ್ಕಿಸುವ ಎನ್‌ಹೆಚ್-948 ಯೋಜನೆ ಘೋಷಿಸುವ ವಿಶ್ವಾಸದಲ್ಲಿದೆ. ಈ‌ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಬೆಳಗಾವಿ ನಗರದಲ್ಲಿ ಚತುಷ್ಪಥ ಎಲಿವೇಟೆಡ್ ರಸ್ತೆ ಕಾರಿಡಾರ್​​ ಯೋಜನೆ, ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ, ಪುಣೆ ಬೆಂಗಳೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್​ ಯೋಜನೆಗಳನ್ನು ಕೇಂದ್ರ ಬಜೆಟ್​ನಲ್ಲಿ ಘೋಷಿಸುವ ನಿರೀಕ್ಷೆಯಲ್ಲಿದೆ.

ರಾಯಚೂರು AIIMS ಮಂಜೂರಿಗೆ ಬೇಡಿಕೆ:ಕೇಂದ್ರ ಆಯವ್ಯಯದಲ್ಲಿ ರಾಯಚೂರಿಗೆ ಏಮ್ಸ್ (AIIMS) ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಈಗಾಗಲೇ ಬೇಡಿಕೆ ಮುಂದಿಟ್ಟಿದೆ. ಈಗಾಗಲೇ ಜೂ.17,2023 ಮತ್ತು ಸೆ.7, 2023 ರಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ರಾಯಚೂರು ನಗರದಲ್ಲಿ ಏಮ್ಸ್‌ (AIIMS) ಸ್ಥಾಪನೆ ಮಾಡಲು ಪತ್ರವನ್ನು ಬರೆಯಲಾಗಿದೆ. ಕರ್ನಾಟಕದ ಬಹು ದಿನಗಳ ಬೇಡಿಕೆ ಕೇಂದ್ರ ಬಜೆಟ್​ನಲ್ಲಿ ಈಡೇರುವ ನಿರೀಕ್ಷೆ ಹೊಂದಲಾಗಿದೆ.

ಬೆಂಗಳೂರು ಟನೆಲ್ ಯೋಜನೆಗೆ ಅನುದಾನ:ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿತ 60 ಕಿ.ಮೀ. ಸುರಂಗ ಮಾರ್ಗ ಯೋಜನೆಗೆ ಅನುದಾನ ನೀಡಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಅಂದಾಜು ಸುಮಾರು 30,000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರದ ಅನುದಾನದತ್ತ ಚಿತ್ತ ನೆಟ್ಟಿದೆ.

ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ ಹಾಗೂ ಬಿಡದಿವರೆಗೆ ಮೆಟ್ರೋ ಮಾರ್ಗ ವಿಸ್ತರಿಸುವ ಯೋಜನೆಗೆ ಕೇಂದ್ರದ ಅನುಮೋದನೆಗೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ. ಬೆಂಗಳೂರು ನಗರದಲ್ಲಿ ನೆರೆ ನಿಗ್ರಹ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್​ನಿಂದ 3,000 ಕೋಟಿ ರೂ. ಆರ್ಥಿಕ ನೆರವು ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನವನ್ನು ಪ್ರಸಕ್ತ 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ. ಇನ್ನು ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರೀಕ್ಷೆ ಇಟ್ಟಿದೆ. ಉಳಿದಂತೆ ಜಲಜೀವನ ಮಿಷನ್​ಗೆ ಹೆಚ್ಚಿನ ಅನುದಾನ, ಹೊಸ ರೈಲ್ವೇ ಮಾರ್ಗ, ರಾಜ್ಯ ರೈಲ್ವೇ ಹಳಿ ಡಬ್ಲಿಂಗ್​, ರಾಜ್ಯ ರೈಲ್ವೇ ನಿಲ್ದಾಣಗಳ ಆಧುನೀಕರಣ, ರಾಜ್ಯ ರೈಲ್ವೇ ಲೈನ್​ ವಿದ್ಯುತೀಕರಣದ ಬಗ್ಗೆ ರಾಜ್ಯ ಸರ್ಕಾರ ನಿರೀಕ್ಷೆಯ ಕಣ್ಣಿಟ್ಟಿದೆ.

ಇದನ್ನೂ ಓದಿ:Union Budget 2024: ನಾಳೆಯಿಂದ ಸಂಸತ್ತಿನ ಕೊನೆಯ ಅಧಿವೇಶನ ಆರಂಭ: ಏನೆಲ್ಲಾ ವಿಶೇಷತೆಗಳು?

ABOUT THE AUTHOR

...view details