ಬೆಂಗಳೂರು:ರಾಜ್ಯದಲ್ಲಿ ಚಳಿ ಮತ್ತು ಮಂಜಿನ ಅಬ್ಬರ ಜೋರಾಗಿದೆ. ಮುಖ್ಯವಾಗಿ, ಉತ್ತರ ಒಳನಾಡಿನಲ್ಲಿ ಶೀತ ಗಾಳಿ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೂರು ಜಿಲ್ಲೆಗಳಿಗೆ ಶೀತ ಗಾಳಿ ಇನ್ನೂ ಹೆಚ್ಚಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಎಲ್ಲೆಲ್ಲಿ ಕೋಲ್ಡ್ ವೇವ್ ಅಲರ್ಟ್?: ಇಂದಿನಿಂದ ಮೂರು ದಿನ ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಕೋಲ್ಡ್ ವೇವ್ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2ರಿಂದ 4 ಡಿಗ್ರಿ ಕಡಿಮೆ ಇರಲಿದೆ. ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.
ಕೋಲ್ಡ್ ವೇವ್ ಯೆಲ್ಲೋ ಅಲರ್ಟ್ ಘೋಷಣೆ (ETV Bharat) ಬೆಂಗಳೂರಿನ ಹವಾಗುಣ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಕೆಲವೆಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಇಲಾಖೆ ಹೇಳಿದೆ.
"ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿದೆ. ಮುಂದಿನ 2 ದಿನಗಳಲ್ಲಿ ಪಶ್ಚಿಮ - ವಾಯುವ್ಯವಾಗಿ ಚಲಿಸಿ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳ ರಾಜ್ಯದ ಒಳನಾಡಿನಲ್ಲಿ ಶುಷ್ಕ ಹವಾಮಾನವಿರಲಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಬೀದರ್ನಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲು:"ಮುಖ್ಯವಾಗಿ, ಮುಂದಿನ 3 ದಿನಗಳ ಕಾಲ ಉತ್ತರ ಒಳನಾಡಿನ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತ ಅಲೆಗಳು ತೀವ್ರವಾಗಿ ಬೀಸುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ 2ರಿಂದ 4 ಡಿಗ್ರಿ ಉಷ್ಣಾಂಶ ಕಡಿಮೆಯಾಗಲಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗಲಿದೆ. ಕರಾವಳಿ ಜಿಲ್ಲೆಗಳ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಕಂಡು ಬರುವುದಿಲ್ಲ. ನಿನ್ನೆ ಬೀದರ್ ಜಿಲ್ಲೆಯಲ್ಲಿ ಅತಿ ಕಡಿಮೆ ಉಷ್ಣಾಂಶ 8 ಡಿಗ್ರಿ ದಾಖಲಾಗಿದೆ" ಎಂದು ಪಾಟೀಲ್ ತಿಳಿಸಿದರು.
ಇದನ್ನೂ ಓದಿ:ತೀವ್ರ ಚಳಿಗೆ ನಡುಗುತ್ತಿದೆ ಉತ್ತರ ಭಾರತ: ಬಡವರಿಗೆ, ನಿರ್ಗತಿಕರ ನೆರವಿಗೆ ಇವೆ ಆಶ್ರಯಧಾಮಗಳು!