ಬೆಂಗಳೂರು: ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಶೃಂಗಸಭೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಮಾಡಿಕೊಂಡಿರುವ ಹಲವು ಒಪ್ಪಂದಗಳ ಫಲವಾಗಿ ಕರ್ನಾಟಕ ರಾಜ್ಯಕ್ಕೆ 23 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹರಿದು ಬರಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.
ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಸ್ಲೆ, ಎಚ್‌ಪಿ, ಎಚ್‌ಸಿಎಲ್, ವೋಲ್ವೊ ಗ್ರೂಪ್, ಐಕಿಯಾ, ಸೋನಿ, ಮೈಕ್ರೊಸಾಫ್ಟ್, ಹಿಟಾಚಿ ಮತ್ತಿತರ ಜಾಗತಿಕ ಉದ್ಯಮಗಳ ಪ್ರಮುಖರ ಜೊತೆಗೆ ರಾಜ್ಯದ ನಿಯೋಗವು 50ಕ್ಕೂ ಹೆಚ್ಚಿನ ಸಭೆಗಳನ್ನು ನಡೆಸಿತು. ಬೆಂಗಳೂರಿನಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ಗಾತ್ರದ ಡೇಟಾ ಸೆಂಟರ್ ಸ್ಥಾಪಿಸಲು ವೆಬ್ವರ್ಕ್ಸ್ ಕಂಪನಿಯು 20,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ಪ್ರಕಟಿಸಿದೆ. ಇದರಿಂದ 1000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
ಡಿಜಿಟಲ್ ಕೌಶಲ ವೃದ್ಧಿ ಪ್ರಕ್ರಿಯೆ ಹಮ್ಮಿಕೊಳ್ಳಲು ಮೈಕ್ರೊಸಾಫ್ಟ್ ವಾಗ್ದಾನ ಮಾಡಿದೆ. ಗ್ರಾಮೀಣ ಪ್ರದೇಶ ಕೇಂದ್ರೀತ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಹಿಟಾಚಿ ಕಂಪನಿಯು 'ಎಂಒಯು'ಗೆ ಸಹಿ ಹಾಕಿದೆ ಎಂದರು. ಬೆಂಗಳೂರಿನ ಆಚೆಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಮಾನ ಕೊಡುಗೆ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ವಹಿವಾಟು ಆರಂಭಿಸಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ. ವಿಜಯಪುರ, ಹುಬ್ಬಳ್ಳಿ – ಧಾರವಾಡ, ಬೆಳಗಾವಿ ಮತ್ತಿತರ ಸ್ಥಳಗಳಲ್ಲಿ ಕೈಗಾರಿಕೆಗಳ ಸಮಾನ ಅಭಿವೃದ್ಧಿ ಸಾಧಿಸುವುದಕ್ಕೆ ಕೊಡುಗೆ ನೀಡುವ ಹಲವಾರು ಉಪಕ್ರಮಗಳನ್ನು ಹಮ್ಮಿಕೊಳ್ಳಲಿವೆ’ ಎಂದು ಹೇಳಿದರು.
ವಿಜಾಪುರದಲ್ಲಿ ಲುಲು ಗ್ರೂಪ್:ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, 'ಲುಲು ಗ್ರೂಪ್, ಬಿಎಲ್ ಅಗ್ರೊ ವಿಜಯಪುರದಲ್ಲಿ ತಮ್ಮ ನೆಲೆ ವಿಸ್ತರಿಸಲಿವೆ. ವಿಜಯಪುರದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಹೊಸ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಹಾಗೂ ಕಲಬುರಗಿಯಲ್ಲಿನ ತನ್ನ ಘಟಕದ ಸಾಮರ್ಥ್ಯ ವಿಸ್ತರಿಸುವ ಉದ್ದೇಶಕ್ಕೆ ಬಂಡವಾಳ ಹೂಡಿಕೆ ಮಾಡಲು ಲುಲು ಸಮೂಹವು ಯೋಜಿಸಿದೆ ಎಂದು ಸಚಿವರು ತಿಳಿಸಿದರು.