ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು 625 ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಐಎಎಸ್ ಅಧಿಕಾರಿ ಆಗುವ ಕನಸು:ಟಾಪರ್ ಅಂಕಿತಾ ತಮ್ಮ ಎಸ್ಎಸ್ಎಲ್ಸಿ ಫಲಿತಾಂಶ ನೋಡಿ ಸಂಭ್ರಮದಲ್ಲಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಖುಷಿಯಲ್ಲೇ ಪ್ರತಿಕ್ರಿಯಿಸಿರುವ ಅಂಕಿತಾ, "ನನಗಿಂತ ನನ್ನ ಟೀಚರ್ಸ್ ಹಾಗೂ ತಂದೆ-ತಾಯಿಗೆ ಹೆಚ್ಚಿನ ಸಂತೋಷವಾಗಿದೆ. ಮುಂದೆ ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕೆನ್ನುವ ಕನಸಿದೆ. ತನಗೆ ಇಬ್ಬರು ತಮ್ಮಂದಿರು ಇದ್ದು ಓರ್ವ ಎರಡನೇ ತರಗತಿ ಹಾಗೂ ಇನ್ನೋರ್ವ 9ನೇ ತರಗತಿಯಲ್ಲಿ ಓದುತ್ತಿರುವುದಾಗಿ" ತಿಳಿಸಿದರು.
ಜಿಲ್ಲಾಧಿಕಾರಿಯಿಂದ ಶುಭಾಶಯ;ವಿದ್ಯಾರ್ಥಿನಿ ಅಂಕಿತಾಗೆ ಶುಭಾಶಯ ಕೋರಿರುವ ಜಿಲ್ಲಾಧಿಕಾರಿ ಜಾನಕಿ ಕೆ. ಎಂ. ಅವರು, ಅವಳ ಸಾಧನೆ ಬೇರೆಯವರಿಗೂ ಸ್ಫೂರ್ತಿ ಆಗಲಿ ಎಂದಿದ್ದಾರೆ.
ಇನ್ನು, 7 ವಿದ್ಯಾರ್ಥಿಗಳು 625 ಕ್ಕೆ 624 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ 2 ಸ್ಥಾನ ಹಂಚಿಕೊಂಡ ವಿದ್ಯಾರ್ಥಿಗಳ ವಿವರ ಹೀಗಿದೆ:ಬಾಗಲಕೋಟೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರು 625 ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರು ದಕ್ಷಿಣದ ಬನಶಂಕರಿಯಲ್ಲಿರುವ ಹೋಲಿ ಚೈಲ್ಡ್ ಆಂಗ್ಲ ಶಾಲೆಯ ಮೇಧ ಪಿ ಶೆಟ್ಟಿ, ಮಧುಗಿರಿ ವಾಸವಿ ಆಂಗ್ಲ ಶಾಲೆಯ ಹರ್ಷಿತಾ, ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯ್, ಚಿಕ್ಕೋಡಿ ಆಚಾರ್ಯ ಸುಬಾಲ್ ಸಾಗರ್ ವಿದ್ಯಾಮಂದಿರದ ಸಿದ್ದಾಂತ್, ಶಿರಸಿಯ ಸರ್ಕಾರಿ ಮಾರಿಕಾಂಬ ಶಾಲೆಯ ದರ್ಶನ್ ಸುಬ್ರಾಯ್ ಭಟ್, ಶಿರಸಿಯ ಸಿದ್ಧಿವಿನಾಯಕ ಶಾಲೆಯ ಚಿನ್ಮಯಿ ಶ್ರೀಪಾದ ಹೆಗ್ಡೆ, ಶಿರಸಿಯ ಶಾರದಾಂಬ ಆಂಗ್ಲ ಶಾಲೆಯ ಶ್ರೀರಾಮ್ 624 ಅಂಕಗಳ ಮೂಲಕ ಜಂಟಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿಯು ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ:
ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.72.83 ರಷ್ಟು ಉತ್ತೀರ್ಣವಾಗಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. 74.17 ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಶಾಲೆ ಫಲಿತಾಂಶ | 72.46% |
ಅನುದಾನಿತ ಶಾಲೆ ಫಲಿತಾಂಶ | 72.22% |
ಅನುದಾನರಹಿತ ಶಾಲೆ ಫಲಿತಾಂಶ | 86.46% |