ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಿಂಗಾರು ಚುರುಕು: ಮುಂದಿನ 24 ಗಂಟೆ ಈ 10 ಜಿಲ್ಲೆಗಳಿಗೆ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

By ETV Bharat Karnataka Team

Published : 4 hours ago

ರಾಜ್ಯದಲ್ಲಿ ಹಿಂಗಾರು ಚುರುಕು
ರಾಜ್ಯದಲ್ಲಿ ಹಿಂಗಾರು ಚುರುಕು (ETV Bharat)

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಾರುತಗಳು ಮತ್ತಷ್ಟು ಚುರುಕುಗೊಂಡಿದ್ದು, ಸಾಕಷ್ಟು ಜಿಲ್ಲೆಗಳಲ್ಲಿ ಮಳೆ ಸುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಎಲ್ಲಿ ಭಾರೀ ಮಳೆ ಸಾಧ್ಯತೆ: ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತುಮಕೂರು, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇನ್ನು ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಮತ್ತು 21 ಡಿಗ್ರಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತವು ಕರಾವಳಿ ಕರ್ನಾಟಕದಿಂದ ತಮಿಳುನಾಡಿನ ಮೂಲಕ ಉತ್ತರ ಶ್ರೀಲಂಕಾದವರೆಗೆ ಸಾಗುತ್ತಿದೆ. ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದೆ. ಇನ್ನೊಂದೆಡೆ ದಕ್ಷಿಣ ತಮಿಳುನಾಡು ಕರಾವಳಿಯ ಮೇಲಿನ ಚಂಡಮಾರುತದ ಪರಿಚಲನೆಯು ಸಹ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದೆ. ಮತ್ತೊಂದೆಡೆ ಇನ್ನೊಂದು ಚಂಡಮಾರುತದ ಪರಿಚಲನೆಯು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲೆ ಇದ್ದು, ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿ ಸಾಗುತ್ತಿದೆ. ಇದರ ಪ್ರಭಾವದಿಂದ ಅಕ್ಟೋಬರ್ 14 ರ ಸುಮಾರಿಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳ ಮೇಲಿನ ಚಂಡಮಾರುತದ ಪರಿಚಲನೆಯು ನೈಋತ್ಯ ಬಂಗಾಳ ಕೊಲ್ಲಿಯ ಮೇಲಿದ್ದು, ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿದೆ. ಈ ಎಲ್ಲ ಕಾರಣದಿಂದ ಹಿಂಗಾರು ಮಳೆ ದಕ್ಷಿಣ ಒಳನಾಡಿನ ಮತ್ತು ಉತ್ತರ ಒಳನಾಡಿನ ಮೇಲೆ ಪ್ರಬಲವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿದೆ. ನಿನ್ನೆಯಿಂದ ಹಾವೇರಿಯಲ್ಲಿ ಅತೀ ಹೆಚ್ಚು 17 ಸೆಂ.ಮೀ ಮಳೆ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಾವೇರಿ: ಸತತ ಮಳೆಗೆ ಬ್ಯಾರೇಜ್​ ಮುಳುಗಡೆ, ನೀರಿನಲ್ಲಿ ತೇಲಿ ಹೋದ ಕುಂಬಳಕಾಯಿ!

ABOUT THE AUTHOR

...view details