ಬೆಂಗಳೂರು:ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸಮರ ಮುಂದುವರೆಸಿರುವ ಲೋಕಾಯುಕ್ತ ಸಂಸ್ಥೆಯು ಮರುಸ್ಥಾಪನೆಯಾದ ಬಳಿಕ ಕಳೆದ ಸಾಲಿನಲ್ಲಿ ನೂರಾರು ದಾಳಿ ನಡೆಸಿ, ಕ್ರಮ ಕೈಗೊಂಡಿದೆ.
2024ರಲ್ಲಿ ರಾಜ್ಯದೆಲ್ಲೆಡೆ ನೂರಾರು ಕಡೆಗಳಲ್ಲಿ ಲೋಕಾಯುಕ್ತರು 66 ದಾಳಿ ನಡೆಸಿದ್ದಾರೆ. 220 ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ದೂರುದಾರರಿಂದ ಲಂಚಕ್ಕೆ ಕೈಯೊಡ್ಡುವಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಭ್ರಷ್ಟಾಚಾರ ನಿಗ್ರಹಪಡೆ (ಎಸಿಬಿ) ರದ್ದುಪಡಿಸಿದ ಹೈಕೋರ್ಟ್ 2022 ಸೆ.9ರಂದು ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಿ ಆದೇಶಿತ್ತು. ಎಸಿಬಿ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಕರಣಗಳು ಲೋಕಾಕ್ಕೆ ವರ್ಗಾವಣೆಗೊಂಡು, ಈ ಹಿಂದೆ ನೀಡಲಾಗಿದ್ದ ಅಧಿಕಾರ ಪಡೆದ ಬಳಿಕ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದೆ.
ವಿಚಾರಣೆ ಎದುರಿಸಿದ ಜನಪ್ರತಿನಿಧಿಗಳು:ಕಳೆದ ವರ್ಷ ಕೆಲ ಪ್ರಕರಣಗಳಲ್ಲಿ ಪ್ರಮುಖ ರಾಜಕೀಯ ನಾಯಕರೂ ಕೂಡ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಪ್ರಮುಖವಾಗಿ ಮುಡಾ ಹಗರಣದಲ್ಲಿ ಮೈಸೂರು ಲೋಕಾಯುಕ್ತರ ಮುಂದೆ ಕಳೆದ ನ.6ರಂದು ಸಿಎಂ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಅ.28ರಂದು ವಿಚಾರಣೆಗೆ ಹಾಜರಾಗಿದ್ದರು. ಗಂಗಾನಗರದ ಸರ್ಕಾರಿ ಜಮೀನು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸೆ.28ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ಚಾಮಿ ಹಾಗೂ ಅಕ್ರಮ ಆಸ್ತಿ ಆರೋಪ ಪ್ರಕರಣದಲ್ಲಿ ಡಿ.3ರಂದು ಸಚಿವ ಜಮೀರ್ ಅಹಮದ್ ಖಾನ್ ಲೋಕಾ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದ್ದರು.